ಬಸವಣ್ಣರ ಚಿಂತನೆಗಳು ಇಂದಿಗೂ ಪ್ರಸ್ತುತ

ತುಮಕೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ  ಬಸವಣ್ಣನವರ ಪುತ್ಥಳಿಗೆ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು  ಪುಷ್ಪನಮನ ಸಲ್ಲಿಸಿದರು. ಪ್ರೊ. ಎಚ್​. ಎಸ್​. ಮೋಹನ್​, ಡಾ. ವೆಂಕಟರೆಡ್ಡಿ ರಾಮರೆಡ್ಡಿ, ಪ್ರೊ.ಪಿ.ಪರಮಶಿವಯ್ಯ, ಪ್ರೊ.ವಿಜಯಕುಮಾರ್​, ಡಾ. ಕೆ.ವಿ.ಸಿಬಂತಿ ಪದ್ಮನಾಭ್​  ಮತ್ತಿತರರು ಇದ್ದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಪುಷ್ಪನಮನ ಸಲ್ಲಿಸಿದರು. ಪ್ರೊ. ಎಚ್​. ಎಸ್​. ಮೋಹನ್​, ಡಾ. ವೆಂಕಟರೆಡ್ಡಿ ರಾಮರೆಡ್ಡಿ, ಪ್ರೊ.ಪಿ.ಪರಮಶಿವಯ್ಯ, ಪ್ರೊ.ವಿಜಯಕುಮಾರ್​, ಡಾ. ಕೆ.ವಿ.ಸಿಬಂತಿ ಪದ್ಮನಾಭ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತುಮಕೂರು ವಿವಿಯಲ್ಲಿ ಬಸವ ಜಯಂತಿ ಆಚರಣೆ
  • ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು
  • ಭಾಷಣಕ್ಕೆ ಸೀಮಿತವಾಗದಿರಲಿ ಬಸವ ತತ್ವಗಳು
ತುಮಕೂರು: ಹನ್ನೆರಡನೇಯ ಶತಮಾನದ ಬಸವಣ್ಣ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ತತ್ವಗಳು ಭಾಷಣಕ್ಕೆ ಸೀಮಿತವಾಗದಿರಲಿ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು. 
ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಬಸವ ಪುತ್ಥಳಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಸಾಮಾನ್ಯರಿಗೂ ಸಮಾನತೆ ಸಾರಿದ ಮಹಾಪುರುಷ ಬಸವಣ್ಣ.  ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂಬುದು ಭಾಷಣ ಮಾಡುವುದಕ್ಕಷ್ಟೇ ಸೀಮಿತವಾಗುತ್ತಿದ್ದೇವೆ. ಜಾತಿ ಮತಗಳನ್ನು ತೊರೆಯಬೇಕೆಂದು ಹೇಳುತ್ತಿದ್ದೇವೆಯೇ ಹೊರತು ಯಾರೂ ಪಾಲಿಸುತ್ತಿಲ್ಲ. ದೇಶದಲ್ಲಿ ಜಾತಿ ವ್ಯವಸ್ಥೆ ಇರಬಾರದು ಹಾಗೂ ನಾವೆಲ್ಲರೂ ಸೇರಿ ಈ ವ್ಯವಸ್ಥೆಯನ್ನು ಅಳಿಸುವುದೇ ಬಸವಣ್ಣನವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದರು. 
ನಿತ್ಯ ಕಾಯಕದಲ್ಲಿ ಗೌರವವಿರಬೇಕು ಮತ್ತು ಮಹನೀಯರೆಲ್ಲರೂ ನುಡಿದಂತೆ ನಡೆದವರಾಗಿದ್ದು, ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ವೇದಿಕೆ ಮೇಲೆ ಪ್ರತಿಷ್ಠೆಗಾಗಿ ಮಾತನಾಡಿದರೆ ಸಾಲದು, ನುಡಿದಂತೆ ನಡೆಯಬೇಕು. ಬಸವಣ್ಣನವರು ಸಮಾಜ ಸುಧಾರಣೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದು, ದಾಸೋಹ ವ್ಯವಸ್ಥೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ್ದಾರೆ.  ಸಿದ್ದಗಂಗಾ ಮಠದಲ್ಲಿ ನಿತ್ಯವೂ ಹತ್ತು ಸಾವಿರ ಮಕ್ಕಳಿಗೆ ದಾಸೋಹ ವ್ಯವಸ್ಥೆ ನಡೆಯುತ್ತಿದೆ. ಇಂತಹ ನಾಡಿನಲ್ಲಿರುವ ನಾವು ಮಹನೀಯರ ತತ್ವಗಳನ್ನು ಅನುಸರಿಸುವ ಮೂಲಕ ನಮ್ಮ ಶ್ರಮದಲ್ಲಿ ಅಲ್ಪ ಭಾಗವನ್ನಾದರೂ ಅನ್ಯರ ಶ್ರೇಯೋಭಿವೃದ್ಧಿಗಾಗಿ ಬಳಸಬೇಕು ಎಂದು ತಿಳಿಸಿದರು. 
ಸಾಂಸತಿಕ ನಾಯಕ ಬಸವಣ್ಣ ಅವರ ನೈತಿಕ ಶಕ್ತಿ, ಸಾಮಾಜಿಕ ಕೊಡುಗೆ ಹಾಗೂ ಭಕ್ತಿಯ ಮಾದರಿ ಇಡೀ ಮಾನವ ಕುಲಕ್ಕೆ ಆದರ್ಶವಾಗಿದೆ. ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಬಂದ ಅವರ ಚಿಂತನೆಗಳು, ಭಕ್ತಿಯ ಭಂಡಾರ, ಸಮಾನತೆ ಮತ್ತು ಹಸಿವನ್ನು ನೀಗಿಸಲು ಜಾರಿಗೆ ತಂದ ದಾಸೋಹ ವ್ಯವಸ್ಥೆ ಇಂದಿನ ಜಗತ್ತಿಗೆ ಮಾದರಿಯಾಗಿವೆ. ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದ್ದು, ಯುದ್ಧ ನಡೆಸುತ್ತಿರುವವರು ಅವರ ಆದರ್ಶಗಳಿಂದ ಪ್ರೇರಣೆ ಪಡೆದು ಯುದ್ಧವನ್ನು ನಿಲ್ಲಿಸಲಿ ಎಂದು ಪ್ರಾಧ್ಯಾಪಕ ಡಾ.ಎನ್​.ನರೇಂದ್ರ ಹೇಳಿದರು. 
ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್​. ಎಸ್​. ಮೋಹನ್​, ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ಪ್ರೊ.ಪಿ.ಪರಮಶಿವಯ್ಯ, ಪ್ರೊ.ವಿಜಯಕುಮಾರ್​, ಡಾ.ಕೆ.ವಿ.ಸಿಬಂತಿ ಪದ್ಮನಾಬ್​ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net