

ತುಮಕೂರು: ಬಸ್ ಪ್ರಯಾಣ ದರ ಏರಿಕೆ ಕುರಿತು ಸಾರಿಗೆ ಸಚಿವರು ಈಗಾಗಲೇ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಯಾವ ಕಾರಣಕ್ಕಾಗಿ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಆಶ್ಚರ್ಯಕರ ಸಂಗತಿಯೆಂದರೆ, ನಮ್ಮ ರಾಜ್ಯದ ಕೆಲವು ಕೇಂದ್ರ ಸಚಿವರು ರಾಜ್ಯ ಸರ್ಕಾರ ಎರಡು ಅಥವಾ ಮೂರು ಬಾರಿ ಬಸ್ ಪ್ರಯಾಣ ದರ ಹೆಚ್ಚಿಸಿದೆ ಎಂದು ಟೀಕಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 14 ಬಾರಿ ಹೆಚ್ಚಿಸಿದಾಗ ಇವರು ಏಕೆ ಮಾತನಾಡಲಿಲ್ಲ? ಆಗ ಯಾವುದೇ ಟೀಕೆಗಳು ವ್ಯಕ್ತವಾಗುವುದಿಲ್ಲವೇ? ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತೀಕ್ಷ್ಣವಾಗಿ ಪ್ರಶ್ನಿಸಿದರು.
ಸಿದ್ದಗಂಗಾ ಮಠಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳನ್ನು ಕಡಿಮೆ ಮಾಡಿದರೆ ಅದರ ನೇರ ಪರಿಣಾಮ ಸಾರಿಗೆ ಇಲಾಖೆಯ ಮೇಲಿನ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. ಬೆಲೆ ಇಳಿಕೆಯಾದಾಗ ನಾವು ಸಹಜವಾಗಿಯೇ ಪ್ರಯಾಣ ದರವನ್ನು ಕಡಿಮೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬಹುದು. ಇಲ್ಲದಿದ್ದರೆ ಡೀಸೆಲ್ ಖರೀದಿಗೆ ಸರ್ಕಾರವೇ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ ಎಂದರು.
ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಹಲವು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಈ ಸಂಸ್ಥೆಗಳನ್ನು ನಿರ್ವಹಿಸುವುದರ ಜೊತೆಗೆ ಹೊಸ ಬಸ್‌ಗಳನ್ನು ಖರೀದಿಸಬೇಕು, ಸಿಬ್ಬಂದಿಗೆ ಹೆಚ್ಚಿನ ಭತ್ಯೆ ನೀಡಬೇಕು. ಇಂತಹ ಎಲ್ಲ ಜವಾಬ್ದಾರಿಗಳನ್ನೂ ಪರಿಗಣಿಸಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಪ್ರಯಾಣ ದರ ಹೆಚ್ಚಳದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.