

ತುಮಕೂರು: ಜಿಲ್ಲೆಯೆಲ್ಲೆಡೆ ಮಳೆಯ ಅಭಾವದಿಂದ ಎಲ್ಲಾ 10 ತಾಲೂಕುಗಳಲ್ಲಿಯೂ ಬೀಕರ ಬರಗಾಲ ಎಂದು ಘೋಷಣೆಯಗಿದ್ದರೂ ಬೋರನಕಣಿವೆ ಜಲಾಶಯಗಳಲ್ಲಿ ಅಳಿದುಳಿದಿರುವ ಸ್ವಲ್ಪ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಲಾಗಿದೆ.
ಬೋರನಕಣಿವೆ ಜಲಾಶಯದ 675.22ಹೆಕ್ಟೇರ್ ಅಚ್ಚುಕಟ್ಟು ಭೂಮಿಯ ಮಾಲೀಕರ ಒತ್ತಾಯಕ್ಕೆ ಮಣಿದಿರುವ ಉಪವಿಭಾಗಾಧಿಕಾರಿ 45 ದಿನಗಳ ಕಾಲ ಮೇವು ಬೆಳೆಯಲು ಮಾತ್ರ ನೀರು ಬಿಡಲು ಅನುಮತಿ ನೀಡಿದ್ದು ಸಣ್ಣನೀರಾವರಿ ಇಲಾಖೆ ಶುಕ್ರವಾರದಿಂದ ತೂಬು ತೆಗೆದುಬಿಟ್ಟಿದೆ.
ಕಟ್ಟು ನೀರು(ಹದಿನೈದು ದಿನ ನೀರು, ಹದಿನೈದು ದಿನ ಬಿಡುವು) ಪದ್ಧತಿಯಲ್ಲಿ ನೀರು ಬಿಡುಗಡೆಗೆ ಅನುಮತಿ ನೀಡಿದ್ದು ಮೇವು ಬೆಳೆಯಲು ಮಾತ್ರ ಅವಕಾಶವಾಗಲಿದೆ. ಭತ್ತ ಸೇರಿದಂತೆ ಅತಿಯಾದ ನೀರು ಬೇಕಾಗುವ ಯಾವುದೇ ಬೆಳೆ ಬೆಳೆಯದಂತೆ ರೈತರಿಗೆ ಮನವಿ ಮಾಡಲಾಗಿದೆ.
ಬೀಕರ ಬರದ ಸಂದರ್ಭದಲ್ಲಿಯೂ ರೈತರು ಹಾಗೂ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಮುಂದಾಲೋಚನೆ ಇಲ್ಲದೆ ಅಚ್ಚಕಟ್ಟು ಪ್ರದೇಶಕ್ಕೆ ನೀರು ಹರಿಸಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರ ಸುತ್ತಮುತ್ತಲ ಸಾವಿರಾರು ಗ್ರಾಮಗಳ ರೈತರ ಆತಂಕ ಹೆಚ್ಚಿಸಿದೆ.
2423.5 ಎಂಸಿಎಫ್‌ಟಿ ನೀರಿನ ಸಾಮರ್ಥ್ಯದ ಬೋರನಕಣಿವೆ ಜಲಾಶಯದಲ್ಲಿ ಪ್ರಸ್ತುತ ಶೇ.70ರಷ್ಟು ಅಂದರೆ 1700 ಎಂಸಿಎಫ್‌ಟಿ ನೀರು ಇದ್ದು 225 ಎಂಸಿಎಫ್‌ಟಿ ನೀರನ್ನು ಮುಂದಿನ ಮೂರು ತಿಂಗಳಲ್ಲಿ ಗರಿಷ್ಟ 45 ದಿನ 675.22ಹೆಕ್ಟೇರ್ ಅಚ್ಚುಕಟ್ಟು ಭೂಮಿಯಲ್ಲಿ ಜಾನುವಾರುಗಳಿಗೆ ಮೇವು ಬೆಳೆಯಲು ಮಾತ್ರ ನೀರು ಹರಿಸಲಾಗುತ್ತಿದೆ.
ಸತತ ಮಳೆಯ ಕಾರಣಕ್ಕೆ 35 ವರ್ಷಗಳ ನಂತರ ತುಂಬಿ ಹರಿದಿದ್ದ ಜಲಾಶಯದಲ್ಲಿ ಶೇ.50ಕ್ಕಿಂತ ಹೆಚ್ಚು ನೀರಿದ್ದ ಸಂದರ್ಭದಲ್ಲಿ ಅಚ್ಚಕಟ್ಟು ಪ್ರದೇಶಕ್ಕೆ ನೀರು ಹರಿಸುವುದು ವಾಡಿಕೆಯಾಗಿದ್ದು ಇದಕ್ಕಾಗಿ ಪರ, ವಿರೋದವಾದ ವಾದ ಕೇಳಿಬಂದಿದೆ.