ಬುಗಡನಹಳ್ಳಿ ಕೆರೆಗೆ ಹರಿದ ಹೇಮೆ: ನಿಟ್ಟುಸಿರು ಬಿಟ್ಟ ಜನತೆ

Bugudanahaiil kere (3)
Published on

ತುಮಕೂರು: ಸ್ಮಾರ್ಟ್​ಸಿಟಿ ತುಮಕೂರಿನ ಕುಡಿಯುವ ನೀರಿನ ದಾಹ ನೀಗಿಸುವ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಶುಕ್ರವಾರ ಸಂಜೆ ಜೀವಗಂಗೆ ಹೇಮೆ ಹರಿದು ಬಂದಳು.

ಹೇಮಾವತಿ ನಾಲಾ ವಲಯದಲ್ಲಿ ಭರ್ಜರಿ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ತುಮಕೂರು ನಾಲೆಗೆ ನೀರು ಹರಿಸಲು ಆರಂಭಿಸಲಾಗಿದ್ದು, ಜಿಲ್ಲೆಯ ಬಹುತೇಕ ಕೆರೆಗಳು ಮುಂಗಾರಿನಲ್ಲಿಯೇ ತುಂಬುವ ವಿಶ್ವಾಸ ಮೂಡಿದೆ.

ಬಗುಡನಹಳ್ಳಿ ಜಲಾಶಯ ಖಾಲಿಯಾಗಿದ್ದರಿಂದ ಆತಂಕಗೊಂಡಿದ್ದ ನಗರವಾಸಿಗಳು ಸಮಾಧಾನಗೊಂಡಿದ್ದು ಮುಂದಿನ 15 ರಿಂದ 20 ದಿನದಲ್ಲಿ ಕೆರೆ ಭರ್ತಿಯಾಗುವ ಸಾಧ್ಯತೆ ಇದೆ. ಹಾಸನ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದಿಂದ ತುಮಕೂರು ನಾಲೆಗೆ 2000ಕ್ಯುಸೆಕ್​ ಪ್ರಮಾಣದಷ್ಟು ನೀರು ಬಿಡಲಾಗಿದ್ದು ಜಿಲ್ಲೆಯ ತುರುವೇಕೆರೆ ಬಳಿ ಜಿಲ್ಲೆಯ ನಾಲೆ ಪ್ರವೇಶಿಸುವ ಹೊತ್ತಿಗೆ 1200 ಕ್ಯುಸೆಕ್​ ಪ್ರಮಾಣದಷ್ಟು ನೀರು ಹರಿಯುತ್ತಿದೆ.

ಬುಗಡನಹಳ್ಳಿ ಜಲಸಂಗ್ರಹಾಗಾರದವರೆಗೆ ತುಮಕೂರು ಬ್ರಾಂಚ್​ ಕೆನಾಲ್​ 124 ಕಿ.ಮೀ., ಉದ್ದವಿದ್ದು 4 ದಿನದಲ್ಲಿಯೇ ಹೇಮಾವತಿ ನೀರು ತುಲುಪಿದೆ. ಹರಿಯುತ್ತಿರುವ ನೀರಿನ ಪ್ರಮಾಣ ಶುಕ್ರವಾರ ಸಂಜೆ ವೇಳೆಗೆ 400ಕ್ಯೂಸೆಕ್​ ದಾಖಲಾಯಿತು.

ಬುಗಡನಹಳ್ಳಿ ತುಂಬಲು 10 ದಿನ
ತುರುವೇಕೆರೆಯಲ್ಲಿ ಹೇಮಾವತಿ ನಾಲೆಯಲ್ಲಿ 1200 ಕ್ಯುಸೆಕ್​ನಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಆದರೆ, ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ 400 ಕ್ಯುಸೆಕ್​ ಪ್ರಮಾಣದ ನೀರು ಹರಿಯಲಿದ್ದು, 0.24 ಟಿಎಂಸಿಯಷ್ಟು ಸಾಮರ್ಥ್ಯವುಳ್ಳ ಜಲಸಂಗ್ರಹಾಗಾರ ತುಂಬಲು 15 ದಿನಗಳು ಸಾಕಾಗಲಿದೆ.


ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮೊದಲಿಗೆ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ನೀರು ತುಂಬಿಸಲು ಆಧ್ಯತೆ ಕೊಡಲಾಗಿದೆ. ನಂತರ ಪಾವಗಡ ಹೊರತುಪಡಿಸಿ ಉಳಿದ 9 ತಾಲುಕು ಕೇಂದ್ರಗಳಲ್ಲಿ ಕುಡಿಯುವ ನೀರಿನ ಯೋಜನೆಯಲ್ಲಿನ ಕೆರೆಗಳಿಗೆ ನೀರು ಹರಿಸಲು ಹೇಮಾವತಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ತುಮಕೂರು ನಗರಕ್ಕೆ ಪ್ರತಿನಿತ್ಯ 57 ಎಂಎಲ್​ಡಿ ನೀರಿನ ಅಗತ್ಯವಿದೆ. ಜಿಲ್ಲೆಯ ವಿವಿಧ ಭಾಗದಲ್ಲಿರುವ 40 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಹರಿಸಬೇಕಿದೆ.

ಎಷ್ಟು ಕೆರೆಗೆ ನೀರು: ಬಾಗೂರು&ನವಿಲೆ ಟನಲ್​ ಮೂಲಕ ಹೇಮಾವತಿ ತುರುವೇಕೆರೆಯಲ್ಲಿ ಜಿಲ್ಲೆಗೆ ಪ್ರವೇಶಿಸಿದ್ದು, ತುಮಕೂರು ನಾಲೆಯ ಉದ್ದಕ್ಕೂ 9 ಎಸ್ಕೇಪ್​ ಗೇಟ್​ಗಳಿದ್ದು, 31 ಹಂಚಿಕೆ ಗೇಟ್​ಗಳಿವೆ. ಕುಡಿಯುವ ನೀರಿನ ಯೋಜನೆಗಳಿರುವ ತುಮಕೂರಿನ 10, ಗುಬ್ಬಿ 4, ಕುಣಿಗಲ್​ 2, ತಿಪಟೂರು 3, ಶಿರಾ 4, ತುರುವೇಕೆರೆ 2 ಹಾಗೂ ಚಿಕ್ಕನಾಯಕನಹಳ್ಳಿ , ಕೊರಟಗೆರೆ, ಮಧುಗಿರಿ ತಾಲೂಕಿನ ತಲಾ 1ಒಟ್ಟು 28 ಕೆರೆಗಳನ್ನು ಕುಡಿಯುವ ನೀರಿನ ಉದ್ದೇಶದಕ್ಕೆ ತುರ್ತಾಗಿ ತುಂಬಿಸಬೇಕಿದೆ.

ಹೇಮಾವತಿಯಿಂದ ನೀರು ಬಿಡಲಾಗಿದ್ದು, ಶುಕ್ರವಾರ ಸಂಜೆ ಬುಗುಡನಹಳ್ಳಿ ಜಲಸಂಗ್ರಹಾರಕ್ಕೆ ತಲುಪಿದೆ. ಶನಿವಾರ ಬೆಳಗ್ಗೆ ನಮಗೆ ನಿಖರವಾಗಿ ಎಷ್ಟು ಹರಿಯಲಿದೆ ಎಂಬುದು ತಿಳಿಯಲಿದೆ.

ವರದಯ್ಯ ಎಸ್​ಇ, ಕಾವೇರಿ ನೀರಾವರಿ ನಿಗಮ ಹೇಮಾವತಿ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net