

ಹುಳಿಯಾರು: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಹೆಗ್ಗೆರೆ ಗ್ರಾಮದ ಸ್ಮಶಾನದ ಪಕ್ಕದಲ್ಲಿರುವ ಈಶ್ವರ(ಗಣಗೇಶ್ವರ) ದೇವರಿಗೆ ಬುಧವಾರ ನಾಗಸಾಧು ಧನಂಜಯ ಭೈರವ ಅಘೋರಿ ವಿಶೇಷ ಪೂಜೆ ಸಲ್ಲಿಸಿದರು. ಕುಂಬಮೇಳದಲ್ಲಿ ದೇವಾಲಯದ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿ ಈ ಭಾಗದ ಜನರ ಗಮನಸೆಳೆದಿದ್ದ ನಾಗಸಾಧು ನೋಡಲು ಸಾವಿರಾರು ಭಕ್ತರು ಮುಗಿಬಿದ್ದರು.
ನಾಗಾಸಾಧು ಧನಂಜಯ ಗುರೂಜಿ ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಯಾರೂ ಇಲ್ಲದ ಸಮಯದಲ್ಲಿ(ನಸುಕಿನಲ್ಲಿ) ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಐತಿಹಾಸಿಕ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಭಾಗವಹಿಸಿದ್ದ ಈ ನಾಗಸಾಧು ಹೆಗ್ಗೆರೆಯ ಚೋಳರಕಾಲದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಮಹಾರುದ್ರ ಶಿವಾಲಯದ ಬಗ್ಗೆ ಮಾತನಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೇವಸ್ಥಾನ ವೀಕ್ಷಣೆಗೆ ತಂಡೋಪ ತಂಡವಾಗಿ ಜನರು ಆಗಮಿಸುತ್ತಿದ್ದರು.
ಜನರೇ ಬಾರದಿದ್ದ ಈ ದೇವಸ್ಥಾನ ಅಭಿವೃದ್ಧಿ ಕಾಣದೆ ಕಳೆಗುಂದಿತು. ನಾಗಸಾಧು ಅವರ ಪ್ರಚಾರದಿಂದಾಗಿ ನಿತ್ಯ ನೂರಾರು ಭಕ್ತರು ಆಗಮಿಸುವ ಜೊತೆಗೆ ದೇವಸ್ಥಾನದ ಪಕ್ಕ ಬೆಳೆದಿದ್ದ ಗಿಡಗಂಟೆಗಳನ್ನ ತರವು ಮಾಡಿ ಅಭಿವೃದ್ಧಿಗೆ ಮುಂದಾಗಲಾಯಿತು. ಇದರ ಜೊತೆಗೆ ಫೆ.19 ರಂದು ಪೂಜೆಗೆ ಆಗಮಿಸುವುದಾಗಿ ನಾಗಸಾಧು ಬರುವುದಾಗಿ ತಿಳಿಸಿದ್ದು ಭಕ್ತರ ಹರ್ಷಕ್ಕೆ ಕಾರಣವಾಗಿತ್ತು.
ಬುಧವಾರ ನಾಗಸಾಧು ದೇವಸ್ಥಾನಕ್ಕೆ ಬರುವ ವಿಚಾರ ಕಾಳ್ಗಿಚ್ಚಿನಂತೆ ಹಬ್ಬಿದರ ಪರಿಣಾಮ ಹೆಗ್ಗೆರೆ, ದಳವಾಯಿಕಟ್ಟೆ, ವೆಂಗಳಾಪುರ, ಓಬಳಾಪುರ, ಕಡವಿಗೆರೆ, ಶ್ರೀರಾಂಪುರ, ನೇರಲಕೆರೆ, ಯಳನಡು, ಹುಳಿಯಾರು, ಗವಿರಂಗಾಪುರ ಸೇರಿ ವಿವಿಧ ಗ್ರಾಮಗಳಿಂದ ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ನಾಗಸಾಧು ಬರುವ ದಾರಿ ಉದ್ದಕ್ಕೂ ಪುಷ್ಪ ಹಾಕಿ ಜೈಕಾರ ಕೂಗಿ ಪೂರ್ಣಕುಂಭ ಸ್ವಾಗತ ಕೋರಲಾಗಿತ್ತಲ್ಲದೆ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ನೂಕ ನುಗ್ಗಲು ಏರ್ಪಟ್ಟಿತ್ತು.
ನಾಗಸಾಧು ಆಗಮಿಸುವ ಸಲುವಾಗಿ ಈಶ್ವರ ಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಾಗಸಾಧು ಅವರಿಂದಲ ಈಶ್ವರ ಲಿಂಗಕ್ಕೆ ವಿಶೇಷ ಪೂಜಾ ಕೈಂಕರ್ಯಗಳನ್ನು ಮಾಡಿಸಲಾಯಿತು. ಒಟ್ಟಾರೆ ಹೆಗ್ಗೆರೆ ಗ್ರಾಮ ನಾಗಸಾಧು ಅವರ ಆಗಮದಿಂದಾಗಿ ಹಬ್ಬದ ವಾತಾವರಣ ನಿಮಾರ್ಣವಾಯಿತು ಜನರಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು.