ಕಾರ್ಗಿಲ್ ವಿಜಯ ದಿವಸ್ ಲೋಗೋ ಅನಾವರಣ; ವಿಜಯವಾಣಿ, ದಿಗ್ವಿಜಯ ಸಹಯೋಗದಲ್ಲಿ ಕಾರ್ಯಕ್ರಮ

17_KARGIL
Published on

ತುಮಕೂರು: ಕಾರ್ಗಿಲ್ ಯುದ್ಧದ ಗೆಲುವಿನ 25ನೇ ವರ್ಷದ ವಿಜಯೋತ್ಸವ ಆಚರಣೆ ಅಂಗವಾಗಿ ಹುತಾತ್ಮ ಯೋಧರ ಸ್ಮರಣಾರ್ಥ ವಿಜಯವಾಣಿ, ದಿಗ್ವಿಜಯ 24/7 ನ್ಯೂಸ್ ಸಹಯೋಗದಲ್ಲಿ ಯುವಜನತೆಯಲ್ಲಿ ದೇಶಪ್ರೇಮ ಉತ್ತೇಜಿಸುವ ನಿಟ್ಟಿನಲ್ಲಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಷಹಪುರವಾಡ್ ಲೋಗೋ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಜಾಹಿರಾತು ವಿಭಾಗದ ಉಪಾಧ್ಯಕ್ಷ ಕೆ.ಆರ್.ಅರುಣ್, ಸಿದ್ಧಗಂಗಾ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಪರಮೇಶ್, ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎಂ.ಬಿ.ಪ್ರದೀಪ್‌ಕುಮಾರ್, ಸುಬೇದಾರ್ ಮೇಜರ್ ದಿನೇಶ್‌ಸಿಂಗ್, ನಾಯಬ್ ಸುಬೇದಾರ್ ಶಿವಲಿಂಗಯ್ಯ ಹಿರೇಮಠ್, ಎನ್‌ಸಿಸಿ ಅಧಿಕಾರಿ ಪ್ರದೀಪ್ ಮತ್ತಿತರರು ಇದ್ದರು.

ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜು.26ರ ಬುಧವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು, ಓದುಗರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವರು.

ಲಾಂಛನ ಅನಾವರಣಗೊಳಿಸಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೈರಿಗಳ ಹಿಮ್ಮೆಟ್ಟಿಸುವಲ್ಲಿ ಕೆಚ್ಚೆದೆ ತೋರಿದ ವೀರಯೋಧರನ್ನು ಸ್ಮರಿಸುವ ಮೂಲಕ ಇಂದಿನ ಯುವಕರಲ್ಲಿ ದೇಶಪ್ರೇಮಾ ಮೂಡಿಸಲು ಕಾರ್ಯಕ್ರಮ ಸಹಾಯಕವಾಗಲಿದೆ ಎಂದರು.

ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ ಮಾತನಾಡಿ, ಕಾರ್ಗಿಲ್ ವಿಜಯ್ ದಿವಸ್‌ಗೆ 25 ವರ್ಷ ಸಂದಿದೆ, 1999 ಜು.26ರಂದು ಪಾಕಿಸ್ತಾನ ಸೈನ್ಯವನ್ನು ಹಿಮ್ಮೆಟ್ಟಿಸಿದ ಭಾರತೀಯ ಸೈನ್ಯ 60 ದಿನಗಳ ದೀರ್ಘ ಹೋರಾಟದಲ್ಲಿ ಜಯಗಳಿಸಿದ್ದನ್ನು ಸ್ಮರಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ತಾಯ್ನಾಡಿಗೆ ನಡೆದ ಸುಧೀರ್ಘ ಹೋರಾಟದಲ್ಲಿ 527 ಭಾರತೀಯ ಯೋಧರು ವೀರಮರಣವನ್ನಪ್ಪಿದ್ದಾರೆ, ಸಾವಿರಾರು ಸೈನಿಕರು ಪ್ರಾಣದ ಭಯತೊರೆದು ಹೋರಾಡಿದ್ದಾರೆ ಅವರನ್ನು ಸ್ಮರಿಸುವ ಅವಕಾಶದಲ್ಲಿ ತುಮಕೂರು ನಗರವಾಸಿಗಳೆಲ್ಲರೂ ಭಾಗವಹಿಸಬೇಕು ಎಂದರು.

ಕಾರ್ಗಿಲ್ ವಿಜಯ ದಿವಸ್ ಹಾಗೂ ವಾಕಥಾನ್‌ಗೆ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬಯೋನೀಡ್ಸ್ ತುಮಕೂರು, ಸಿಐಟಿ ತಾಂತ್ರಿಕ ಮಹಾವಿದ್ಯಾಲಯ, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ, ಸ್ಫೂರ್ತಿ ಗ್ರೂಪ್ಸ್, ಡಿಸಿಸಿ ಬ್ಯಾಂಕ್ ಹಾಗೂ ತುಮಕೂರು ನಗರ ವೀರಶೈವ ಸೇವಾ ಸಮಾಜ, ಎನ್‌ಸಿಸಿ 4ನೇ ಕರ್ನಾಟಕ ಬೆಟಾಲಿಯನ್, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ವಿವಿಧ ಶಾಲಾ-ಕಾಲೇಜುಗಳು, ಸಂಘ-ಸAಸ್ಥೆಗಳು ಕೈಜೋಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net