

ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ದಿಮೆದಾರರಿಗೆ ಟ್ರೇಡ್ ಲೈಸೆನ್ಸ್ ಹಾಗೂ ನವೀಕರಣಕ್ಕಾಗಿ ಏ.1 ರಿಂದ ಹೊಸದಾಗಿ "ವ್ಯಾಪಾರ' ಎಂಬ ತಂತ್ರಾಂಶ ಬಳಕೆ ಮಾಡಲಾಗುತ್ತಿದೆ.
ಈ ಹಿಂದೆ ಟ್ರೇಡ್ ಲೈಸೆನ್ಸ್ ನೀಡಲು ಹಾಗೂ ನವೀಕರಣ ಮಾಡಲು ಬಳಸಲಾಗುತ್ತಿದ್ದ ಹಳೆಯ ಓಯಸಿಸ್ ತಂತ್ರಾಂಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಈಗಾಗಲೇ "ವ್ಯಾಪಾರ' ತಂತ್ರಾಂಶವನ್ನು ಬಳಕೆ ಮಾಡಲಾಗುತ್ತಿದೆ.
ಟ್ರೇಡ್ ಲೈಸೆನ್ಸ್ ಪಡೆಯಲು ಹಾಗೂ ನವೀಕರಣ ಮಾಡ ಬಯಸುವವರು http://www.mrc.gov.in/ ವೆಬ್ಸೈಟ್ಗೆ ಭೇಟಿ ನೀಡಿ "ಸಿಟಿಜನ್ ಆನ್ಲೈನ್ ಸರ್ವೀಸ್' ವಿಭಾಗವನ್ನು ಕ್ಲಿಕ್ ಮಾಡಿದರೆ ವಿವಿಧ ಸೇವೆಗಳು ತೆರೆದುಕೊಳ್ಳಲಿದೆ. ಅದರಲ್ಲಿ "ಅಪ್ಲೆೃ ಫಾರ್ ಟ್ರೇಡ್ ಲೈಸನ್ಸ್' ವಿಭಾಗವನ್ನು ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ತುಂಬಿ ಟ್ರೇಡ್ ಲೈಸನ್ಸ್ ಪಡೆದುಕೊಳ್ಳಬಹುದು.
ಈ ತಂತ್ರಾಂಶದ ಮೂಲಕವೇ ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಸಹ ಪಾವತಿ ಮಾಡಬಹುದು. ವರ್ತಕರು ಸಲ್ಲಿಸಿದ ಅರ್ಜಿಯು ಪ್ರಸ್ತುತ ಯಾವ ಹಂತದಲ್ಲಿ ಇದೆ ಎಂಬುದನ್ನು ಆನ್ಲೈನ್ನಲ್ಲಿ ಪರಿಶೀಲಿಸಬಹುದು. ಪರವಾನಗಿ ಆನ್ಲೈನ್ನಲ್ಲಿಯೇ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಹಿಂದೆ ಹಲವು ಹಂತದ ಪರಿಶೀಲನೆ ನಡೆಯುತಿತ್ತು. ಆದರೆ ಹೊಸ ತಂತ್ರಾಂಶದಲ್ಲಿ ಎರಡು ಹಂತದ ಪರಿಶೀಲನೆ ಮಾತ್ರ ನಡೆಯುತ್ತದೆ.