ತಿಪಟೂರು ಎಪಿಎಂಸಿ ರೈತಭವನಕ್ಕೆ ಅಧಿಕಾರಿ ಕೊಕ್ಕೆ; ಪೊಲೀಸರಿಗೆ ದೂರು ನೀಡಿದ ಮುಖಂಡರು

oppo_2
oppo_2
Published on

ತುಮಕೂರು: ರೈತರಿಗಾಗಿಯೇ ನಿರ್ಮಾಣವಾಗಿರುವ ತಿಪಟೂರು ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ರೈತ ಮುಖಂಡರು ಸಭೆ ನಡೆಸಲು ಸ್ಥಳಾವಕಾಶ ನೀಡದ ಎಪಿಎಂಸಿ ಕಾರ್ಯದರ್ಶಿ ನಿರ್ಧಾರ ರೈತರು ಹಾಗೂ ಎಪಿಎಂಸಿ ಅಧಿಕಾರಿಗಳ ನಡುವೆ ಉಂಟಾಗಿರುವ ಕಿಚ್ಚು ಪೊಲೀಸ್​​ ಠಾಣೆ ಮೆಟ್ಟಿಲೇರಿದೆ.

ವಿವಿಧ ರೈತ ಮುಖಂಡರ ನೇತೃತ್ವದ ಸಂಯುಕ್ತ ಹೋರಾಟ ಸಮಿತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು ಅಧಿಕಾರಿಗಳು ಹಾಗೂ ರೈತ ಮುಖಂಡರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ರೈತ ಭವನವನ್ನು ಎಪಿಎಂಸಿ ಕಾರ್ಯದರ್ಶಿ ಅತಿಕ್ರಮಿಸಿ ಕಚೇರಿ ನಿರ್ಮಿಸಿಕೊಂಡಿದ್ದು ಕೂಡಲೇ ತೆರವುಗೊಳಿಸಬೇಕು ಎಂದು ರೈತರು ಪೊಲೀಸರಿಗೆ ದೂರು ನೀಡಿದ್ದಾರೆ.

ಏನಿದು ವಿವಾದ?: ರೈತ ಸಂಘಟನೆಗಳು ಅಕ್ಟೋಬರ್ 3 ರಂದು ತಿಪಟೂರು ಕೊಬ್ಬರಿ ಮಂಡಿಯಲ್ಲಿರುವ ರೈತ ಭವನದಲ್ಲಿ ಕೊಬ್ಬರಿ ಆನ್ ಲೈನ್ ಕುರಿತು ಸಭೆ ನಡೆಸಲು ಅನುಮತಿ ನೀಡುವಂತೆ ಕಾರ್ಯದರ್ಶಿ ನ್ಯಾಮಗೌಡಗೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ನ್ಯಾಮಗೌಡ ರೈತ ಸಭಾಂಗಣದಲ್ಲಿ ಖಾಸಗಿ ವ್ಯಕ್ತಿ, ಸಂಘ, ಸಂಘಟನೆಗಳಳಿಗೆ ಸಭೆ ನಡೆಸಲು ಅವಕಾಶವಿಲ್ಲ ಎಂದು ಹಿಂಬರಹ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.


ಈ ಹಿಂದೆ ಕಾರ್ಯನಿರ್ವಹಿಸಿದ್ದ ಎಪಿಎಂಸಿ ಕಾರ್ಯದರ್ಶಿ ಟಿ.ಪಿ.ಗಾಯತ್ರಿ ನ್ಯಾಯಾಲಯಕ್ಕೆ ನೀಡಿದ್ದ ಹೇಳಿಕೆಯಲ್ಲಿ ರೈತ ಭವನ ರೈತರಿಗೆ ಸೇರಿದ್ವದು ಎಂಬುದು ದೃಢವಾಗಿದ್ದು ಕಚೇರಿ ತೆರವುಗೊಳಿಸುವಂತೆ ಲೋಕಾಯುಕ್ತರು ಸೂಚಿಸಿದ್ದನ್ನು ರೈತರು ದೂರಿನಲ್ಲಿ ಉಲ್ಲೇಖಿಸಿರುವುದು ಕುತೂಹಲ ಮೂಡಿಸಿದೆ.

ದೂರು ನೀಡಿದ ಸಂದರ್ಭದಲ್ಲಿ ಜಿಲ್ಲಾ ಸಂಯುಕ್ತ ಹೋರಾಟ ಸಮಿತಿ ಕಾರ್ಯದರ್ಶಿ ಎಸ್.ಎನ್. ಸ್ವಾಮಿ, ಪ್ರೊ. ಜಯಾನಂದಯ್ಯ. ತಿಮ್ಲಾಪುರ ದೇವರಾಜು. ಜಯಚಂದ್ರ ಶರ್ಮ, ತಿಮ್ಲಾಪುರ ಗೌರೀಶ್, ಉಮೇಶ್, ಗಂಗಾಧರಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net