

ತುಮಕೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಬೆಳಗ್ಗೆ 8ರಿಂದ 2024ರ ಜನವರಿ 2ರ ಬೆಳಗ್ಗೆ 8ರ ವರೆಗೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಯೂ ಆದ, ಜಿಲ್ಲಾಧಿಕಾರಿ ಶುಭಕಲ್ಯಾಣ್ ಆದೇಶಿಸಿದ್ದಾರೆ.
ಸತತ ಎರಡು ದಿನಗಳು ಪ್ರವಾಸಿಗರಿಗೆ ನಿರ್ಬಂಧಿಸಿರುವುದು ಸ್ಥಳೀಯ ವ್ಯಾಪಾರಿಗಳ ಆದಾಯಕ್ಕೆ ಹೊಡೆತ ನೀಡಿದ್ದು ನಿಯಮವನ್ನು ಸಡಿಲಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಾಮದ ಚಿಲುಮೆ, ಬಸದಿ ಬೆಟ್ಟ ಹಾಗೂ ದೇವರಾಯನದುರ್ಗ ಪ್ರದೇಶಗಳಿಗೆ ಸಾರ್ವಜನಿಕರು, ಪ್ರವಾಸಿಗರು ಹಾಗೂ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.
ಹೊಸ ವರ್ಷಾಚರಣೆ ಸಂದರ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆಯಿದ್ದು, ಸಂಭ್ರಮಾಚರಣೆ ಸಮಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಂಭವದ ಹಿನ್ನೆಲೆಯೆಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಮದ್ಯಪಾನ ಮಾಡಿ ಹಾಗೂ ಜಾಲಿರೈಡ್ ನೆಪದಲ್ಲಿ ವಾಹನಗಳನ್ನು ಚಾಲನೆ ಮಾಡುವುದರಿಂದ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸುವ ಹಾಗೂ ಈ ಪ್ರದೇಶಗಳು ಸುರಕ್ಷಿತ ಅರಣ್ಯ ಆವೃತ ಪ್ರದೇಶಗಳಾಗಿದ್ದು, ಪ್ರವಾಸಿಗರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ.
ಆದರೆ, ನಿರ್ಬಂಧಿತ ಅವಧಿಯಲ್ಲಿ ಮೇಲ್ಕಾಣಿಸಿದ ಮಾರ್ಗವಾಗಿ ದೈನಂದಿನ ಚಟುವಟಿಕೆಗಳಿಗೆ ತೆರಳುವ ಸ್ಥಳೀಯರು ಮಾರ್ಗ ಮಧ್ಯೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ತೆರಳಲು ಅನುಮತಿ ನೀಡಲಾಗಿದೆ.