ಏಕತಾನತೆ ಆಧುನಿಕ ಜಗತ್ತಿನ ದೊಡ್ಡ ಪಿಡುಗು

16TMK_Muruga_Sri
Published on

ತುಮಕೂರು: ಏಕತಾನತೆ ಆಧುನಿಕ ಜಗತ್ತಿನ ದೊಡ್ಡ ಪಿಡುಗು, ಕೇಳಿದ್ದನ್ನೇ ಕೇಳುವುದು, ಮಾಡಿದ್ದನ್ನೇ ಮಾಡುವುದಕ್ಕೆ ಏಕತಾನತೆ ಎನ್ನುತ್ತಾರೆ. ಇದರಿಂದ ಮಾನವ ಹೊರತಾಗಿರಬೇಕು ಎಂದು ಚಿತ್ರದುರ್ಗ ಮುರುಘಾ ಮಠಾಧ್ಯಕ್ಷ ಶ್ರೀಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಪಟ್ಟರು.


ನಗರದ ಜಯದೇವ ವಿದ್ಯಾರ್ಥಿನಿಲಯದ ಶಿವಮೂರ್ತಿ ಮುರುರಾಜೇಂದ್ರ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ "ಬಸವ ಯೋಗ ಕಮ್ಮಟ' ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ರಸ್ತುತ ಬದುಕಿನಲ್ಲಿ ಎಲ್ಲರೂ ಅಹಂಕಾರಕ್ಕೆ ಒಳಗಾಗಿದ್ದೇವೆ. ಈ ಅಹಂಕಾರ ನಮ್ಮನ್ನು ಆವರಿಸಿಕೊಂಡಿದೆ. ಯಾರು ಅಷ್ಟ ಮದಗಳನ್ನು ದೂರ ಕಳುಹಿಸುತ್ತಾರೋ, ಅವರ ಬದುಕಿನಲ್ಲಿ ಹದ ಬರುತ್ತದೆ, ಮದ ಇದ್ದವರ ಬದುಕಿನ ಕದ ಮುಚ್ಚಿ ಹೋಗುತ್ತದೆ, ಹದ ಬಂತೆಂದರೆ ಬಾಗಿಲು ತೆಗೆದುಕೊಳ್ಳುತ್ತದೆ ಎಂದರು.


ಲಿಂಗಾಯತರಾಗಿದ್ದು, ಲಿಂಗ ಧರಿಸಿದವರು, ಲಿಂಗ ಧರಿಸಿದ್ದರೂ ಲಿಂಗದ ಅರಿವು, ಜ್ಞಾನ ಇಲ್ಲದವರೂ ನಮ್ಮ ಮಧ್ಯೆ ಇದ್ದಾರೆ. ಅಹಂಕಾರ ಹೋಗುವವರೆಗೂ ಜೀವನ ಅನಾವರಣ ಆಗುವುದಿಲ್ಲ, ಸುಜ್ಞಾನದಿಂದ ಇರಬೇಕು. ಅವಧಾನ ಮತ್ತು ಸಮಾಧಾನವನ್ನು ಲಿಂಗ ಅನುಗ್ರಹಿಸುತ್ತದೆ ಎಂದು ಹೇಳಿದರು.

ಶರಣರು ಆಸ್ತಿ ಹಿಂದೆ ಸುತ್ತಲಿಲ್ಲ, ಹಣದ ಜತೆ ತಿರುಗಾಡಲಿಲ್ಲ, ಅಂತಸ್ತಿನ ಜತೆ ಸಾಗಲಿಲ್ಲ. ಕಾರಣ ಯಾವುದೂ ಶಾಶ್ವತವಲ್ಲ ಎಂಬುದನ್ನು ಅರಿತಿದ್ದರು ಆದರೆ, ಅನುಭವ ಶಾಶ್ವತ. ಇದಕ್ಕಾಗಿ ಬಸವಣ್ಣನವರು ಅನುಭವವನ್ನು ಸುತ್ತಿದರು ಎಂದರು. ಬೈಲೂರು ನಿಷ್ಕಲ ಮಂಟಪದ ತೋಂಟದಾರ್ಯ ಮಠದ ಶ್ರೀನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಅನುಭಾವಿಗಳ ಮಾತುಗಳ ಹಾಗೂ ಧರ್ಮದ, ತತ್ವದ, ಸಿದ್ಧಾಂತಗಳ ಬಗ್ಗೆ ಕಮ್ಮಟದಿಂದ ನಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಬಸವ ಕೇಂದ್ರದ ಸಿದ್ಧಗಂಗಮ್ಮ ಬಿ.ಸಿದ್ಧರಾಮಣ್ಣ, ಶ್ರೀಬಸವಕಿರಣ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net