

ತುಮಕೂರು: ಮನುಷ್ಯನಿಗೆ ಅಹಂಕಾರ ಒಳ್ಳೆಯದಲ್ಲ, ಅಧಿಕಾರ, ಧನ, ಪಾಂಡಿತ್ಯ ಇತ್ಯಾದಿಗಳು ಅಹಂಕಾರ ಸೃಷ್ಟಿಸುತ್ತವೆ, ಆದ್ದರಿಂದ ಅಹಂಕಾರ ಬಿಟ್ಟು ಮಮಕಾರ ಬೆಳೆಸಿಕೊಳ್ಳಬೇಕು ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ರಾಮಕೃಷ್ಣ&ವಿವೇಕಾನಂದ ಆಶ್ರಮದಲ್ಲಿ ಶುಕ್ರವಾರ ಸಂಜೆ ಗುರುವಂದನೆ ಸ್ವೀಕರಿಸಿ, ಆಶೀರ್ವಚನ ನೀಡಿದರು. ಸರ್ವರ ಬಗೆಗಿನ ಮಮಕಾರ ಅಪರಿಮಿತವಾದದ್ದು, ಹಾಗೂ ಸರ್ವರಿಗೂ ಶ್ರೇಯಸ್ಸನ್ನು ಬಯಸುತ್ತದೆ. ಶ್ರೀ ಶಂಕರ ಭಗವತ್ಪಾದರು ಮನುಕುಲದ ಒಳಿತಿಗಾಗಿ ಶ್ರಮಿಸಿದವರು. ಮೋಕ್ಷವನ್ನು ಗಳಿಸುವ ಜೀವನಾದರ್ಶ ಜಗತ್ತಿಗೆ ಉಪದೇಶಿಸಿದವರು ಎಂದರು. ಜಗತ್ತಿಗೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ, ಯಾವುದೇ ವಿದ್ಯೆಯಲ್ಲಿ ಪ್ರಾವಿಣ್ಯತೆ ಸಾಧಿಸಲು ಗುರುವಿನ ಉಪದೇಶ ಅನಿವಾರ್ಯ. ಗುರುವಿನೊಂದಿಗೆ ಶ್ರದ್ಧಾಭಕ್ತಿ ಮತ್ತು ವಿನಮ್ರ ವಿಧೇಯತೆಯಿಂದ ನಡೆದುಕೊಳ್ಳಬೇಕು, ನಾವು ವಿನಮ್ರತೆಯಿಂದ ವ್ಯವಹರಿಸಿದಷ್ಟೂ ಗುರುವಿನಿಂದ ಉತಷ್ಟ ಜ್ಞಾನೋಪದೇಶ ಪಡೆಯಲು ಸಾಧ್ಯ ಎಂದರು.
ಭಾರತದ ಪವಿತ್ರ ಸನಾತನ ಪರಂಪರೆಯನ್ನು ಅತ್ಯಂತ ಪ್ರಭಾವಶಾಲಿಯಾಗಿ ಜನತೆಗೆ ಪರಿಚಯಿಸುವಲ್ಲಿ ಮಹತ್ತರ ಯಶಸ್ಸನ್ನು ಸಾಧಿಸಿದೆ. ವ್ಯಕ್ತಿತ್ವ ನಿರ್ಮಾಣದ ಮೂಲಕ ಸಮಾಜ ನಿರ್ಮಾಣದ ಕೈಂಕರ್ಯದಲ್ಲಿ ರಾಮಕೃಷ್ಣಾಶ್ರಮಗಳು ಕ್ರಿಯಾಶೀಲವಾಗಿ ಶ್ರಮಿಸುತ್ತಿವೆ ಎಂದು ಶ್ಲಾಸಿದರು.
ಸಮಾಜದ ಎಲ್ಲ ವರ್ಗದ ಜನರಲ್ಲಿ ವಿಶ್ವಾಸ ಮೂಡಿಸಿ ಸರ್ನ್ಮಾಗದಲ್ಲಿ ಸಾಗುವಂತೆ ಪ್ರೇರೇಪಿಸುತ್ತಿದೆ. ಅಲ್ಲದೆ ಶ್ರೀ ಶಂಕರ ಭಗವತ್ಪಾದರ ಚಿಂತನೆಗಳನ್ನು ಭಜನೆ, ಪ್ರವಚನ, ಪುಸ್ತಕ ಪ್ರಕಟಣೆಗಳ ಮೂಲಕ ಸಕಲರಿಗೂ ಲಭ್ಯವಾಗುವಂತೆ ಶ್ರಮಿಸುತ್ತಿರುವ ಆಶ್ರಮವು ಸಂಸತಿ ಪ್ರಸರಣದ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.
ಗದಗ&ವಿಜಯಪುರ ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿದರು. ತುಮಕೂರು ರಾಮಕೃಷ್ಣ&ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಆಶ್ರಮದ ಸಂಪ್ತ ಪರಿಚಯ ಮಾಡಿಕೊಟ್ಟರು.
ಸ್ವಾಮಿ ಪ್ರಕಾಶಾನಂದಜೀ, ಸ್ವಾಮಿ ಶಾಂತಾನಂದಜೀ, ಸ್ವಾಮಿ ಬ್ರಹ್ಮನಿಷ್ಠಾನಂದಜೀ, ಸ್ವಾಮಿ ಅಭಯಾನಂದಜೀ, ಸ್ವಾಮಿ ಮಹೇಶ್ವರಾನಂದಜೀ, ಸ್ವಾಮಿ ಶಿವಸ್ವರೂಪಾನಂದಜೀ, ಶ್ರೀಗುರುದೇವಚರಣಾನಂದಜೀ, ಸ್ವಾಮಿ ಧೀರಾನಂದಜೀ ಮತ್ತು ಸ್ವಾಮಿ ಪರಮಾನಂದಜೀ ಗುರುವಂದನೆ ಸಲ್ಲಿಸಿದರು.
ಶಾಸಕ ಡಾ.ಜಿ.ಪರಮೇಶ್ವರ್, ಜಿ.ಬಿ.ಜ್ಯೋತಿಗಣೇಶ್, ನಿವೃತ್ತ ಐಎಎಸ್ ಅಧಿಕಾರಿ ಗೋಪಾಲಕೃಷ್ಣೇಗೌಡ, ಎಸ್.ಎನ್.ಗಿರೀಶ್, ಉಷಾ ಮತ್ತಿತರರು ಉಪಸ್ಥಿತರಿದ್ದರು.