

ಶಿರಾ: ಕಂದಾಯ ಇಲಾಖೆಯ ಅವ್ಯವಹಾರಗಳು ಒಂದೊಂದಾಗಿಯೇ ಹೊರಬರಲಾರಂಭಿಸಿವೆ. ಗುಬ್ಬಿ, ಚಿಕ್ಕನಾಯಕನಹಳ್ಳಿ ನಂತರ ಶಿರಾ ತಾಲೂಕಿನಲ್ಲಿ ಬಹುದೊಡ್ಡ ಭೂ ಅಕ್ರಮ ಬಯಲಾಗಿದೆ.
ತಾಲೂಕಿನ ಸೀಬಿಯಲ್ಲಿ ಸರ್ವೇ ನಂ.59, 68,69,70,142, 143, 144, 146, 147 ಮತ್ತು 34ರಲ್ಲಿ 700 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆ ಅಧಿಕಾರಿಗಳ ಜತೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಕೊಳ್ಳೆ ಹೊಡೆಯಲು ಯತ್ನಿಸಿದ್ದ ವಂಚಕರ ಬಣ್ಣವನ್ನು ಇಬ್ಬರು ಮಹಿಳಾ ಅಧಿಕಾರಿಗಳು ಕಳಚಿದ್ದಾರೆ.
ಭೂಗಳ್ಳರ ಕೃತ್ಯವನ್ನು ತಹಸೀಲ್ದಾರ್ ಮಮತಾ ಹಾಗೂ ಈ ಹಿಂದೆ ವಲಯ ಅರಣ್ಯಾಧಿಕಾರಿಯಾಗಿದ್ದ ರಾಧಾ ಬಯಲಿಗೆಳೆದು ಸರ್ಕಾರದ ಆಸ್ತಿಯನ್ನು ರಕ್ಷಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ರೈತರ ಹೆಸರಲ್ಲಿ ಜಮೀನು ಕಬಳಿಕೆಗೆ ದಾಖಲೆ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದ್ದ 10ಕ್ಕೂ ಹೆಚ್ಚು ಭೂಗಳ್ಳರು 2022 ಜ.10ರಂದು ಕಾಳಾಪುರ, ಕಳ್ಳೆಂಬೆಳ್ಳ, ಶೀಬಿ ಅಗ್ರಹಾರ, ಹನುಮಂತ ನಗರ ವಾಸಿಗಳೆಂದು ಪೌತಿವಾರಸು ಮೇರೆಗೆ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು ಅಕ್ರಮ ಬಯಲಿಗೆ ದಾರಿಯಾಗಿದೆ.
ಒಂದೇ ಊರು, ಒಂದೇ ಮಾದರಿ ಜಮೀನು!?: ಪವತಿವಾರಸು ಮೇರೆಗೆ ಖಾತೆ ಬದಲಾವಣೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದವರೆಲ್ಲಾ ಶೀಬಿ ಹಾಗೂ ಶೀಬಿ ಅಗ್ರಹಾರ ಗ್ರಾಮದ ವಿಳಾಸ ಕೊಟ್ಟಿದ್ದರು. ಅರ್ಜಿದಾರರ ಪೂರ್ವಿಕರು 1948 ರಿಂದ 1954ರ ನಡುವೆಯೇ ಸರ್ಕಾರಿ ಹರಾಜಿನಲ್ಲಿ ಈ ಜಮೀನು ಕೊಂಡಿದ್ದ ದಾಖಲೆಯಿದ್ದವು, ಇದೇ ಜಮೀನುಗಳನ್ನು ಪೌತಿ ಖಾತೆ ಮಾಡಿಕೊಡಿ ಎಂದು ತಹಸೀಲ್ದಾರ್ಗೆ ಮನವಿ ಮಾಡಿಕೊಂಡಿದ್ದರು. ಈ ಜಮೀನು ಅರಣ್ಯ ಇಲಾಖೆ ವಶದಲ್ಲಿದ್ದರೂ 1948, 1949, 1950, 1954, 1956ನೇ ವರ್ಷಗಳಲ್ಲಿ ಹರಾಜಿನಲ್ಲಿ ಕೊಂಡಿದ್ದ ಕೆಲವು ದಾಖಲೆಗಳ ನಕಲು ಪ್ರತಿಗಳನ್ನು ಅರ್ಜಿ ಜತೆಗೆ ಸಲ್ಲಿಸಲಾಗಿತ್ತು. ಅನುಮಾನಗೊಂಡ ತಹಸೀಲ್ದಾರ್ ಮಮತಾ ದಾಖಲೆಗಳ ಪರಿಶೀಲನೆಗೆ ಮುಂದಾದಾಗ ಅಕ್ರಮಕ್ಕೆ ತಯಾರಿ ನಡೆಸಿರುವುದು ಬಯಲಾಗಿದೆ.
ಬೆದರಿಕೆಗೆ ಜಗ್ಗದ ತಹಸೀಲ್ದಾರ್ ವರ್ಗಾವಣೆಗೆ ಸಂಚು?: ಭೂ ಅಕ್ರಮ ತಡೆದ ತಹಸೀಲ್ದಾರ್ ಮಮತಾ ಅವರಿಗೆ ಬೆದರಿಕೆ ಕರೆಗಳೂ ಬಂದಿವೆ ಎನ್ನಲಾಗಿದೆ, ಆಮಿಷಗಳಿಗೆ ಬಗ್ಗದ ತಹಸೀಲ್ದಾರ್ ವರ್ಗಾವಣೆಗೂ ಭೂಗಳ್ಳರು ಸರ್ಕಾರದಲ್ಲಿ ಪ್ರಭಾವ ಬಳಸಿದ್ದಾರೆ ಎಂಬ ಗುಸುಗುಸು ಶಿರಾ ತಾಲೂಕು ಕಚೇರಿ ಆವರಣದಲ್ಲಿ ಕೇಳಿ ಬಂದಿದೆ. ಭೂಗಳ್ಳರ ಪಟ್ಟಿಯಲ್ಲಿ ನಿವೃತ್ತ ಐಎಎಸ್, ಐಪಿಎಸ್, ಬೆಂಗಳೂರು ಮೂಲದ ಪ್ರಭಾವಿ ಶಾಸಕರ ಸಹೋದರ ಸೇರಿದಂತೆ ಟಾನುಟಿಗಳೇ ಇದ್ದಾರೆ ಎನ್ನಲಾಗಿದೆ. ಸಾಕಷ್ಟು ಒತ್ತಡಕ್ಕೂ ಜಗ್ಗದ ತಹಸೀಲ್ದಾರ್ ಮಮತಾ ಏಪ್ರಿಲ್ 22ರಂದು ಅರ್ಜಿಗಳನ್ನು ಸೂಕ್ತ ದಾಖಲೆಗಳಿಲ್ಲದೆ ವಜಾಗೊಳಿಸಿದ್ದಾರೆ