ಸಿದ್ಧಗಂಗಾ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

SIII
Published on

ತುಮಕೂರು: ಇಂದು ನಾವು ರಕ್ತದಾನ ಮಾಡಿದರೆ ಅಗತ್ಯವಿರುವ ರೋಗಿಗಳ ನಾಳೆಗಳನ್ನು ಸುಂದರವಾಗಿರಿಸಬಹುದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಭಾರತ ದೇಶದಲ್ಲಿ ಪ್ರತಿ ೨ ಸಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಒಮ್ಮೆ ರಕ್ತದಾನ ಮಾಡಿದರೆ ಅದು ವೈದ್ಯರ ಸೇವೆಯಷ್ಟೇ ಸಮವಾಗಿದ್ದು ಒಂದು ಜೀವ ಉಳಿಸಿದ ತೃಪ್ತಿ ನಮ್ಮಲ್ಲಿರುತ್ತದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ವೈದ್ಯಕೀಯ ವಿದ್ಯಾರ್ಥಿಗಳು ತುರ್ತುಸಂದರ್ಭದ ಪರಿಸ್ಥಿತಿಯನ್ನು ಎದುರಿಸುತ್ತಾ ಇರುತ್ತೀರಿ ನೀವು ಹಾಗೂ ರೋಗಿಗಳ ನಡುವೆ ಸೇತುವೆಯಂತೆ ಕೆಲಸ ಮಾಡುವುದರಿಂದ ಜನರಲ್ಲಿರುವ ಮೂಢನಂಬಿಕೆ ಕಳೆದು ಅರಿವು ಮೂಡಿಸಬೇಕು.ಜೊತೆಗೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಮಾದರಿಯಾಗಬೇಕು ಎಂದರು.

ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ ಮಾತನಾಡಿ, 18 ವರ್ಷದಿಂದ 65 ವರ್ಷದ ಒಳಗಿನ ಯಾರಾದರೂ ರಕ್ತದಾನ ಮಾಡಬಹುದು. ದೇಹದಲ್ಲಿ ಕೆಂಪು ರಕ್ತಕಣಗಳ ಸರಾಸರಿ ಜೀವಿತಾವಧಿಯು 120 ದಿನಗಳಾಗಿರುತ್ತವೆ. ರಕ್ತದಾನ ಮಾಡದಿದ್ದರೂ ಸಹಾ ಕಣಗಳು ನೈಸರ್ಗಿಕವಾಗಿ ಸಾಯುತ್ತವೆ. ಹಾಗಾಗಿ ಈ ಕಣಗಳು ಸಾಯುವ ಮುನ್ನ ರಕ್ತದಾನ ಮಾಡುವುದರಿಂದ, ಬೇರೊಬ್ಬರ ಜೀವವನ್ನು ಉಳಿಸಬಹುದು ಎಂದರು.

ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ರಕ್ತದಾನ ಮಹತ್ವದ ಕುರಿತಾಗಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು‌. ರಕ್ತದಾನ ಮಾಡಿದ ಇಬ್ಬರಿಗೆ ಸನ್ಮಾನಿಸಲಾಯಿತು.

 ಸಿಇಓ ಡಾ.ಸಂಜೀವ್ ಕುಮಾರ್, ಪೆಥಾಲಜಿಸ್ಟ್ ಡಾ.ರಶ್ಮಿ, ಡಾ.ಹರೀಶ್, ರಕ್ತನಿಧಿ ವಿಭಾಗದ ಮುಖ್ಯಸ್ಥ ಯಶೋಧರ, ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net