

ಪಾವಗಡ: ತಾಲೂಕಿನ ವೆಂಕಟಮ್ಮನಹಳ್ಳಿ ನಕ್ಸಲರ ಬಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ 19 ವರ್ಷದಿಂದ ತಲೆ ಮರೆಸಿಕೊಂಡಿರುವ ಐದು ಜನರನ್ನು ಪೊಲೀಸರು ಭಾನುವಾರ ರಾತ್ರಿ ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ತಲೆ ಮರೆಸಿಕೊಂಡಿರುವ 37 ಆರೋಪಿಗಳ ಮೇಲೆ ಪಾವಗಡದ ಘನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದು ಈ ಪೈಕಿ ಮಾಜಿ ನಕ್ಸಲ್ ಆಗಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಆAಧ್ರಪ್ರದೇಶದ ಕೆ.ಎಂ.ಪಾಳ್ಯ ಗ್ರಾಮದ ಬೋಯಆಂಜನೇಯಲು(47), ತಲ್ಲಿಮಡುಗ್ಲು ಗ್ರಾಮದ ರಾಮಮೋಹನ(44), ಬೋಯ ಓಬಳೇಶ್(48), ಗಂತಿಮರಿ ಗ್ರಾಮದ ನಾಗರಾಜು(45) ಹಾಗೂ ಕೋನಾಪುರಂ ಪದ್ಮ ಅಲಿಯಾಸ್ ನಾಗಮಣಿ(35) ಅವರನ್ನು ಆಂಧ್ರಪ್ರದೇಶದಿAದ ಬಂಧಿಸಿ ಕರೆತಂದು ಪಾವಗಡದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಆಂಧ್ರಪ್ರದೇಶದಲ್ಲಿ ಬಂಧಿಸಿರುವ ಆರೋಪಿಗಳನ್ನು ಭಾನುವಾರ ರಾತ್ರಿ ಭಾರಿ ಭದ್ರತೆಯ ನಡುವೆ ಪಾವಗಡ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಠಾಣೆಗೆ ಗೇಟ್‌ಗೆ ಬೀಗ ಹಾಕಿ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಮಾಡಲಾಗಿತ್ತು.
ಪಾವಗಡ ನ್ಯಾಯಾಲಯಕ್ಕೆ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಕರೆತಲಾಗಿತ್ತು, ಸುದ್ದಿ ತಿಳಿದು ನೂರಾರು ಜನರು ಆರೋಪಿಗಳನ್ನು ನೋಡಲು ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು. ಆರೋಪಿಗಳನ್ನು ಮುಂದಿನ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕೋರ್ಟ್ ಆದೇಶಿಸಿತು.
ಪ್ರಕರಣದಲ್ಲಿ ಭಾಗಿಯಾಗಿರುವ ಬಹುತೇಕ ಆರೋಪಿಗಳು ಆಂಧ್ರ ಸರ್ಕಾರದಲ್ಲಿ ಶರಣಾಗಿ ಪ್ರಕರಣಗಳಿಂದ ಮುಕ್ತಿ ಪಡೆದು ವಿವಿಧೆಡೆಗಳಲ್ಲಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯದ ಗಡಿ ಭಾಗದಲ್ಲಿರುವ ಪಾವಗಡ ತಾಲೂಕು ಅಂದಿನ ಅಖಂಡ ಆಂಧ್ರಪ್ರದೇಶಕ್ಕೆ ಹೊಂದಿಕೊAಡಿದ್ದು ನಕ್ಸಲ್ ಚಟುವಟಿಕೆಗಳಿಂದ ಕುಖ್ಯಾತಿ ಪಡೆದಿತ್ತು.
ನಕ್ಸಲರನ್ನು ನಿಗ್ರಹಿಸಲು ರೂಪಿಸಿದ್ದ ನಕ್ಸಲ್ ನಿಗ್ರಹ ಪಡೆ ಪಾವಗಡ ತಾಲೂಕು ವೆಂಕಟಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ 2005ರ ಫೆ.10ರಂದು ವಾಸ್ತವ್ಯ ಮಾಡಿತ್ತು. ಬಂದೂಕು, ಬಾಂಬ್ ಹಾಗೂ ಹ್ಯಾಂಡ್ ಗ್ರೆÊನೇಡ್‌ಗಳೊಂದಿಗೆ ಶಿಬಿರಕ್ಕೆ ನುಗ್ಗಿದ್ದ 300 ಜನ ಮಾವೊಯಿಸ್ಟ್ ನಕ್ಸಲೀಯರು ಪೊಲೀಸರ ಅತ್ಯಾಧುನಿಕ ಶಸ್ತಾçಸ್ತçಗಳನ್ನು ದೋಚಿ, ವಿಶ್ರಾಂತಿ ಪಡೆಯುತ್ತಿದ್ದ ಪೊಲೀಸರ ಮೇಲೆ ಏಕಾಏಕಿ ಗುಂಡಿನ ಮಳೆಗೈದಿದ್ದರು.
ಈ ದಾಳಿಯಲ್ಲಿ ಹುತಾತ್ಮರಾದ ಏಳು ಪೊಲೀಸರ ಜತೆ ಶಾಲೆ ಮುಂದೆ ನಿಂತಿದ್ದ ಖಾಸಗಿ ಬಸ್ ಕ್ಲೀನರ್ ಕೂಡ ಮೃತಪಟ್ಟಿದ್ದು ದೇಶದೆಲ್ಲೆಡೆ ಸುದ್ದಿಯಾಗಿತ್ತು. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಪೊಲೀಸರು ಕ್ರಾಂತಿಕಾರಿ ಗಾಯಕ ಗದ್ದರ್, ವರವರರಾವ್ ಸೇರಿದಂತೆ 42 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪೈಕಿ ತಲೆ ಮರೆಸಿಕೊಂಡಿರುವ 37 ಆರೋಪಿಗಳ ಮೇಲೆ ಪಾವಗಡದ ಘನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.