

ತುಮಕೂರು: ಗಾಂಧಿ ಪುರಸ್ಕಾರಕ್ಕೆ ಪಾತ್ರವಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೋರಗೆರೆ ಗ್ರಾಪಂ 14ನೇ ಹಣಕಾಸು ಯೋಜನೆಯಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವುದು ದೃಢವಾಗಿದೆ.
ನಿಯಮಗಳನ್ನು ಉಲ್ಲಂಘಿಸಿ ಹಣ ದುರುಪಯೋಗದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷ ಬಿ.ಎಸ್.ದಿನೇಶ್ ಸದಸ್ಯತ್ವವನ್ನೇ ರದ್ದುಗೊಳಿಸಲು ಶಿಫಾರಸು ಮಾಡಿ ತುಮಕೂರು ಜಿಪಂ ಕುಂದು ಕೊರತೆ ನಿವಾರಣಾ ಪ್ರಾಧಿಕಾರ ತೀರ್ಪು ನೀಡಿದೆ.
ಗ್ರಾಪಂ ಸದಸ್ಯರಾಗಿದ್ದ ಬಿ.ಎಸ್.ದಿನೇಶ್ ನಕಲಿ ಬಿಲ್ಲುಗಳನ್ನು ಸೃಷ್ಠಿಸಿ, 14ನೇ ಹಣಕಾಸು ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ 32000ರೂ. ಗ್ರಾಪಂ ಖಾತೆಯಿಂದ ಪಡೆದಿದ್ದಾರೆ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಎನ್.ಎಲ್.ಮಣಿಕಂಠ ಎಂಬುವವರು ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಕಾರ್ಯಾಲಯಕ್ಕೆ 2022 ಜೂನ್ 24ರಂದು ದೂರು ಸಲ್ಲಿಸಿದ್ದರು.
ಪ್ರಕರಣ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ್ದ ಪ್ರಾಧಿಕಾರ 2023 ನವೆಂಬರ್ 29ರಂದು ಆದೇಶ ಹೊರಡಿಸಿದ್ದು ಆರೋಪಿತ, ಹಾಲಿ ಕೋರಗೆರೆ ಗ್ರಾಪಂ ಅಧ್ಯಕ್ಷ ಬಿ.ಎಸ್.ದಿನೇಶ್ ಸದಸ್ಯತ್ವವನ್ನೇ ರದ್ದುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಪಂ ಸಿಇಒಗೆ ಆದೇಶದಲ್ಲಿ ಶಿಫಾರಸು ಮಾಡಿದೆ.
ಅಂದಿನ ಪ್ರಭಾರಿ ಪಿಡಿಒ, ನಿವೃತ್ತ ಗ್ರಾಪಂ ಕಾರ್ಯದರ್ಶಿ ಟಿ.ಕೆಂಚಯ್ಯ ಅವರೂ ಅಕ್ರಮದಲ್ಲಿ ಭಾಗಿಯಾಗಿದ್ದು ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲು ಜಿಪಂ ಸಿಇಒಗೆ ಪ್ರಾಧಿಕಾರ ಶಿಫಾರಸು ಮಾಡಿದೆ.
ಈ ಅಕ್ರಮಗಳ ಬಗ್ಗೆ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಹಾಲಿ ಪಿಡಿಒ ಎನ್.ನವೀನ್‌ಕುಮಾರ್‌ಗೆ 5000ರೂ. ದಂಡ ವಿದಿಸಲಾಗಿದ್ದು ಪಾವತಿಸಲು 30 ದಿನಗಳ ಗಡುವು ನೀಡಿದೆ.
ಈ ಆದೇಶದ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲವಕಾಶವಿದೆ.