

ತುಮಕೂರು: ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಹಾಗೂ ಮಧ್ಯವರ್ತಿಗಳ ಹಾವಳಿ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ನೋಂದಣಿ ಹಾಗೂ ಮುದ್ರಾಂಕಗಳ ಇಲಾಖೆ ಆಯುಕ್ತೆ ಡಾ.ಬಿ.ಆರ್. ಮಮತಾ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ಬುಧವಾರ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದ ಅವರು, ಜನರಿಗೆ ಕನಿಷ್ಠ ಮೂಲ ಸೌಕರ್ಯವನ್ನು ಒದಗಿಸದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವೀಕ್ಷಣೆ ನಂತರ ಕಚೇರಿಯಲ್ಲಿಯೇ ಅಧಿಕಾರಿಗಳ ಜತೆ ಸಭೆ ನಡೆಸಿದ ಡಾ.ಬಿ.ಆರ್.ಮಮತಾ, ಮುಂದಿನ ಮೂರು ತಿಂಗಳೊಳಗೆ ಕಚೇರಿಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿ ಮಾರ್ಪಡಿಸಬೇಕು ಎಂದು ಸೂಚಿಸಿದರು.
ಸರ್ಕಾರದ ಬೊಕ್ಕಸ ತುಂಬಲು ಉಪ ನೋಂದಣಾಧಿಕಾರಿಗಳ ಕಚೇರಿಗೆ ಬರುವಂತಹ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಕಂದಾಯ ಸಚಿವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ 3 ತಿಂಗಳ ಗಡುವು ನೀಡಲಾಗಿದೆ ಎಂದರು.
ರಾಜ್ಯದ ಎಲ್ಲ ನೋಂದಣಾಧಿಕಾರಿಗಳ ಕಚೇರಿಗಳೂ ಮುಂದಿನ 3 ತಿಂಗಳೊಳಗೆ ತಮ್ಮ ಕಚೇರಿಗಳಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂದರು. ನಿವೇಶನ, ಜಮೀನು ನೋಂದಣಿಗಾಗಿ ಬರುವವರಿಗೆ ಕುಡಿಯುವ ನೀರು, ಶೌಚಗೃಹ, ವೈಟಿಂಗ್ ರೂಂ, ಪೀಠೋಪಕರಣ, ಅಂಗವಿಕಲರಿಗೆ ರ್ಯಾಂಪ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಲ್ಲದೆ ಟೋಕನ್ ಪದ್ಧತಿಯಡಿ ನೋಂದಣಿ ಮಾಡಬೇಕು ಎಂದರು.
ರಾಜ್ಯದ ಎಷ್ಟೋ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಶೌಚಗೃಹದ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ಅಗತ್ಯವಿರುವ ಕಡೆ ಹೊಸ ಶೌಚಗೃಹ ನಿರ್ಮಾಣಕ್ಕಾಗಿ ಅನುದಾನ ಕಲ್ಪಿಸಲಾಗುವುದು ಎಂದರು.
ಕೆಲವು ಕಟ್ಟಡಗಳು ಶಿಥಿಲಾವಸ್ಥೆ ತಲುಪಿ ಮೇಲ್ಛಾವಣಿ ಸೋರುತ್ತಿದೆ, ಇಂತಹ ಕಟ್ಟಡಗಳನ್ನು ಗುರುತಿಸಿ ಬೇರೆಡೆ ಸ್ಥಳಾಂತರಿಸಲು ಹಾಗೂ ಸ್ವಂತ ನಿವೇಶನಗಳಿದ್ದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಗೂ ಮುನ್ನ ನೂತನವಾಗಿ ನಿರ್ಮಿಸಿರುವ ಗುಬ್ಬಿ ತಾಲೂಕು ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಮಮತಾ, ಕಚೇರಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದಲ್ಲಿ ಅನುಕೂಲ ಕಲ್ಪಿಸಲು ಅಗತ್ಯ ಅನುದಾನ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ನೋಂದಣಾಧಿಕಾರಿ ಸೈಯದ್ ನೂರ್ ಪಾಷಾ, ಚಿಕ್ಕಬಳ್ಳಾಪುರ ಜಿಲ್ಲಾ ನೋಂದಣಾಧಿಕಾರಿ ಎಂ.ಶ್ರೀದೇವಿ, ತುಮಕೂರಿನ ಉಪನೋಂದಣಾಧಿಕಾರಿ ರಂಗರಾಜು ಇದ್ದರು.
ಸರ್ಕಾರ ಆದಾಯದ ಮೂಲವಾಗಿರುವ ರಾಜ್ಯದ ಎಲ್ಲ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಅನುದಾನ ನೀಡಲಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಟೋಕನ್ ವ್ಯವಸ್ಥೆ ಮೂಲಕ ನೋಂದಣಿಗೆ ಸೂಚಿಸಿದ್ದೇನೆ.
>ಡಾ.ಬಿ.ಆರ್.ಮಮತಾ ಆಯುಕ್ತೆ, ನೋಂದಣಿ ಹಾಗೂ ಮುದ್ರಾಂಕಗಳ ಇಲಾಖೆ