

ಮಧುಗಿರಿ: ಸರ್ಕಾರಿ ಸೌಲಭ್ಯ ಸಿಗದೆ ರೈತರು ಕೃಷಿಯಿಂದ ವಿಮುಖವಾಗುತ್ತಿರುವುದು… ರಸಗೊಬ್ಬರದ ಕೊರತೆ.. ಬೆಳೆ ನಷ್ಟ ಪರಿಹಾರ ಸಿಗದೆ ಕಂಗಾಲಾದ ರೈತರು…ಶಾಲೆ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತರೂ ಕ್ರಮ ಕೈಗೊಳ್ಳದ ಅಧಿಕಾರಿಗಳು…ಎತ್ತಿನಹೊಳೆ ಕಾಮಗಾರಿ ವಿಳಂಬ ಸೇರಿ ಇನ್ನಿತರ ವಿಷಯಗಳು ತಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಚರ್ಚಿತವಾದವು.
ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವ ಬಹುತೇಕ ರೈತರು ಜಮೀನುಗಳನ್ನು ಬೀಳು ಬಿಟ್ಟಿದ್ದು, ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ತಲೆದೋರಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಎಚ್ಚರಿಸಿದರು.
ರೈತರು ಸೊರಗಿದರೆ ದೇಶವೇ ಸೊರಗುತ್ತದೆ. ಕೃಷಿ ಉತ್ತೇಜಿಸಲು ವಿದ್ಯುತ್, ನೀರು, ಗೊಬ್ಬರ, ಬಿತ್ತನೆ ಬೀಜ ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿ ಎಂದರು.
ನಿರ್ಮಿತಿ ಕೇಂದ್ರದಲ್ಲಿ ಯಾವ ಕಾಮಗಾರಿ ಯಾವ ಹಂತದಲ್ಲಿವೆ. ಐ.ಡಿ.ಹಳ್ಳಿಯ ಸರ್ಕಾರಿ ಶಾಲಾ ಕಾಂಪೌಡ್ ಕಾಮಗಾರಿ ಸೇರಿ ಕೆಲ ಕಾಮಗಾರಿಗಳ ವಿಳಂಬಕ್ಕೆ ಕಾರಣವೇನು..? ಎಂದು ಶಾಸಕರು ಪ್ರಶ್ನಿಸಿದಾಗ, ಶಾಲೆಯ ಅಕ್ಕ-ಪಕ್ಕವರವರು ಕಾಂಪೌಂಡ್ ನಿರ್ಮಿಸಲು ತಕರಾರು ಮಾಡುತ್ತಿದ್ದಾರೆ. ತಕರಾರು ಬಗೆ ಹರಿಸಿಕೊಟ್ಟರೆ 3 ತಿಂಗಳಲ್ಲಿ ಕಾಂಪೌಂಡ್ ನಿರ್ಮಿಸುವುದಾಗಿ ನಿರ್ಮಿತಿ ಕೇಂದ್ರದ ಅಧಿಕಾರಿ ಶಾಂತರಾಜು ತಿಳಿಸಿದರು. ಬಹುಶ@ ಅವರೇ ಒತ್ತುವರಿ ಮಾಡಿಕೊಂಡಿರಬೇಕು. ಈ ಬಗ್ಗೆ ತಕ್ಷಣ ಬಗೆಹರಿಸಿ ಎಂದು ಬಿಇಒಗೆ ಸೂಚಿಸಿದರು.
ಇನ್ನು ಕೆಲ ಕಾಮಗಾರಿ ಅರ್ಧದಲ್ಲೇ ಇವೆಯಲ್ಲ ಎಂದು ಶಾಸಕರು ಕೇಳಿದಾಗ ಇಲಾಖಾ ಮಟ್ಟದಲ್ಲಿದ್ದು, ಸ್ವಲ್ಪ ತಡವಾಗುತ್ತಿದೆ ಎಂದು ಶಾಂತರಾಜು ವಿವರಿಸಿದಾಗ, ಜಿಲ್ಲಾ ಕೇಂದ್ರವೇನು ಅಮೇರಿಕಾದಲ್ಲಿದೆಯಾ..? ಎಂದ ಶಾಸಕರು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದರು. ತಾಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ಶೇ. 80 ಪೂರ್ಣಗೊಂಡಿದ್ದು, ಇನ್ನೂ ಶೇ.20 ಕಾಮಗಾರಿ ಭೂಮಿ ಸ್ವಾಧಿನ ಪ್ರಕ್ರಿಯೆಯಿಂದ ವಿಳಂಬವಾಗುತ್ತಿದೆ ಎಂದು ಎತ್ತಿನಹೊಳೆ ಜೆಇ ವಿಜಯ್ ಪ್ರಸಾದ್ ಮಾಹಿತಿ ನೀಡಿದರು.
ಗ್ರೇಡ್ 2 ತಹಸೀಲ್ದಾರ್ ತಿಪ್ಪೇಸ್ವಾಮಿ, ಎಇಇ ಸುರೇಶ್ ರೆಡ್ಡಿ, ಗ್ರಾಮೀಣ ಕುಡಿವ ನೀರು ಇಲಾಖೆಯ ಎಇಇ ರಾಮದಾಸ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀನರಸಪ್ಪ, ಪಿಡಬ್ಲ್ಯೂಡಿ ಎಇಇ ರಾಜಗೋಪಾಲ್, ಪಶು ಇಲಾಖೆ ಎಇಇ ಗಿರೀಶ್ ಬಾಬು ರೆಡ್ಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಪದ್ಮಾವತಮ್ಮ, ಬಿಸಿಎಂ ಅಧಿಕಾರಿ ಜಯರಾಂ, ನಾಮನಿರ್ದೇಶಿತ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ, ರತ್ನಮ್ಮ, ಇಮ್ತಿಯಾಜ್ ಪಾಷಾ, ರಂಗನಾಥ್ ಇದ್ದರು.
ರಸಗೊಬ್ಬರದ ಕೊರತೆ: ತಾಲೂಕಿನಲ್ಲಿ ಕಳೆದ ವರ್ಷ ಮತ್ತು ಈ ಬಾರಿಯೂ ಮುಂಗಾರು ಉತ್ತಮವಾಗಿದ್ದು, 35 ಸಾವಿರ ಹೆಕ್ಟರ್ ಬಿತ್ತನೆಯಾಗಿದೆ ಎಂದು ತಿಳಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಶೇಂಗಾ, ರಾಗಿ, ನೆಲಗಡಲೆ ತೊಗರಿ ದಾಸ್ತಾನಿದೆ. ರಸಗೊಬ್ಬರದ ಕೊರತೆಯಿದೆ, ಸದ್ಯಕ್ಕೆ ತೊಂದರೆಯಿಲ್ಲ. ಕೆಲ ದಿನಗಳಲ್ಲ ಸಿಗುವ ಭರವಸೆಯಿದೆ ಎಂದರು.
ಮಧುಗಿರಿ ಭಾಗದ ರೈತರಿಗೇಕೆ ಪರಿಹಾರ ಸಿಕ್ಕಿಲ್ಲ?: ತಾಲೂಕಿನಲ್ಲಿ 198 ರೈತರು ಬೆಳೆ ಪರಿಹಾರಕ್ಕೆ ನೋಂದಣಿ ಮಾಡಿಕೊಂಡಿದ್ದು, 110 ಜನರಿಗೆ ವಿಮೆ ಬಂದಿದೆ. ಇನ್ನು 30 ಜನರಿಗೆ ಕೆಲ ಗೊಂದಲಗಳಿಂದ ವಿಳಂಬವಾಗಿದ್ದು, ಶೀಘ್ರದಲ್ಲೆ ಬರುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ್ ಗೌಡ ಮಾಹಿತಿ ನೀಡಿದಾಗ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ ಪಾವಗಡ ತಾಲೂಕಿನ ರೈತರು ಪಡೆದಷ್ಟು ಬೆಳೆ ವಿಮೆ ಮಧುಗಿರಿ ತಾಲೂಕಿನ ರೈತರಿಗೇಕೆ ಸಿಕ್ಕಿಲ್ಲ ಎಂದು ಕೇಳಿದರು. ಪಾವಗಡ ತಾಲೂಕು ಸತತ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಆಗುತ್ತಿರುವುದರಿಂದ ಅಲ್ಲಿನ ರೈತರಿಗೆ ಹೆಚ್ಚು ಪರಿಹಾರ ಸಿಗುತ್ತಿದೆ ಎಂದರು.
ಮಟಮಟ ಮಧ್ಯಾಹ್ನವೇ ಮದ್ಯ ಸೇವಿಸಿ ಗಲಾಟೆ ಮಾಡ್ತಾರೆ: ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಕಾರ್ಡ್ ಕೇಳಲು ಹೋದರೆ ಇಲಾಖಾ ಸಿಬ್ಬಂದಿ ಮಟಮಟ ಮಧ್ಯಾಹ್ನವೇ ಮದ್ಯ ಸೇವಿಸಿ ಗಲಾಟೆ ಮಾಡುತ್ತಾರೆ ಎಂದು ಕೆಡಿಪಿ ನಾಮ ನಿರ್ದೇಶನ ಸದಸ್ಯ ವೆಂಕಟೇಶ್ ಸಭೆಯಲ್ಲಿ ಆರೋಪಿಸಿದರು. ಜನಸಂಖ್ಯಾ ಆಧಾರದ ಮೇಲೆ ಕೊಡಿಗೇನಹಳ್ಳಿ ಅಥವಾ ಬಡವನಹಳ್ಳಿ ಗ್ರಾಪಂಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪ ಮಾಡಲು ಗ್ರಾಪಂಗಳಲ್ಲಿ ಸಭಾ ನಡಾವಳಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಕೆಡಿಪಿ ನಾಮಿನಿ ಸದಸ್ಯ ನಾಗರಾಜಪ್ಪ ತಿಳಿಸಿದಾಗ ಇಲ್ಲಿ ರಾಜಕೀಯ ಚರ್ಚೆ ಬೇಡ, ರಾಜಕೀಯ ಚರ್ಚೆ ಮಾಡಿದಲ್ಲಿ ಸಭೆ ಮೊಟಕುಗೊಳುತ್ತೇನೆ ಎಂದು ಶಾಸಕ ವೀರಭದ್ರಯ್ಯ ಎಚ್ಚರಿಸಿದರು.