

ಮಧುಗಿರಿ: ಭಾರತದ ಮುಖ್ಯನ್ಯಾಯಮೂರ್ತಿ ಪೀಠದ ಮೇಲೆ ವಕೀಲ ಶೂ ಎಸೆಯುತ್ತಾನೆ ಎಂದರೆ ಅದು ಆತಂಕಕಾರಿ, ನಮ್ಮ ದೇಶದ ಪರಿಸ್ಥಿತಿ ಎಲ್ಲಿಗೆ ಹೋಗುತ್ತಿದೆ ಎಂಬ ಆತಂಕ ಮೂಡಿಸುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ತಾಲೂಕಿನ ಮಿಡಿಗೇಶಿಯಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯ ನ್ಯಾಯದೀಶರ ಮುಂದೆ ಅನುಚಿತವಾಗಿ ವರ್ತಿಸಿರುವ ನಾನು ಜೈಲಿಗೆ ಹೋಗಲಿಕ್ಕೂ ಸಿದ್ದ ಎಂಬ ಕಠೋರ ಮನಸ್ಸಿನ ವಿಕೃತ ಮನಸ್ಸಿನ ನ್ಯಾಯವಾದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕಾನೂನುಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನ್ಯಾ.ಗವಾಯಿ ಅವರು ವಿದ್ವತ್ತಿನಿಂದ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಇದು ಯಾವುದೇ ರಾಜಕೀಯದಿಂದ ನೇಮಕಾತಿಯಲ್ಲ. ಅವರ ಸಾಮರ್ಥ್ಯ, ಅವರಲ್ಲಿರುವ ವಿದ್ವತ್ ಗುರುತಿಸಿ ನ್ಯಾಯಲಯದ ಕೊಲಿಜಿಯಂ ಆಯ್ಕೆ ಮಾಡಿ ನೇಮಕ ಮಾಡಿದೆ.ಅಂತಹ ಒಬ್ಬ ಉತ್ತಮ ಗುಣಮಟ್ಟದ ನಡವಳಿಕೆಯ ವ್ಯಕ್ತಿಯನ್ನ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಒಂದೇ ಕಾರಣ ಇಟ್ಕೊಂಡು.ಸನಾತನವಾದಿಗಳು ಶೂ ಎಸೆಯೋದು, ಅಗೌರವ ತೋರೊದು ಖಂಡನೀಯ ಎಂದರು.
ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಕರಾಳ ಛಾಯೆ ಎಂದು ಈ ಘಟನೆಯನ್ನ ಖಂಡಿಸುತ್ತೇನೆ, ಆ ಸನಾತನವಾದಿ ಇನ್ನೂ ಕೂಡ ಘಟನೆಗೆ ವಿಷಾದ ವ್ಯಕ್ತಪಡಿಸುವ ವಿಶಾಲ ಹೃದಯವಿಲ್ಲದ ಕಠೋರ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು. ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದರು.
ನಾನು ಹಾಸನ ಉಸ್ತುವಾರಿ ನೇಮಕವಾದ ಬಳಿಕ ಹಾಸನಾಂಬ ದೇವಸ್ಥಾನದಲ್ಲಿ ಆದಾಯ ಹೆಚ್ಚಾಗಿದೆ, 1.25ಕೋಟಿ ರೂ ಆದಾಯ ಗಳಿಸುತ್ತಿದ್ದ ದೇವಾಲಯ ಈಗ 14 ಕೋಟಿ ರೂ. ಆದಾಯ ಗಳಿಸುವಂತಾಗಿದೆ. ಎಲ್ಲೆಲ್ಲಿ ಸೋರಿಕೆಯಾಗುತ್ತಿತ್ತೊ ಅಲ್ಲೆಲ್ಲಾ ನಮ್ಮವರನ್ನು ನಿಲ್ಲಿಸಿ ಬ್ರೇಕ್ ಹಾಕಿದೆ. ಹಾಸನದ ಆಗಿನ ಡಿಸಿ ಸತ್ಯಭಾಮಾ ಯಾರಿಗೂ ಕೇರ್ ಮಾಡದೇ ಚೆನ್ನಾಗಿ ನಿರ್ವಹಿಸಿದ್ದರು ಎಂದರು.
ಎಲ್ಲೆಡೆಯೂ ಸರ್ಕಾರಿ ಭೂಮಿ ಲಭ್ಯತೆ ಕಡಿಮೆಯಾದಂತೆ ಬೆಲೆಯೂ ಹೆಚ್ಚುತ್ತಿದೆ, ಇದರಿಂದ ಆಸೆಯೂ ಹೆಚ್ವುತ್ತಿದೆ. ಈ ಹಿಂದೆ ಪೂರ್ವಜರು ದಾನ ಮಾಡಿದ ಭೂಮಿಗೆ ಕೆಲವರು ಈಗ ಹಕ್ಕು ಕೇಳಲು ಬರುತ್ತಿರುವುದು ವಿಪರ್ಯಾಸ. ಆದ್ದರಿಂದ ಪ್ರತಿಯೊಬ್ಬರೂ ದಾಖಲೆಗಳನ್ನು ಸರಿಯಾಗಿಟ್ಟುಕೊಳ್ಳಿ. ಪಕ್ಕಪಕ್ಕದವರು ಪರಸ್ಪರ ಕಷ್ಟ ಸುಖ ಹಂಚಿಕೊಂಡು ಬದುಕಿ. ಕೋರ್ಟ್ ಕಚೇರಿ ಅಲೆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಏನೇ ಮಾಡಿದರೂ ಮನಸ್ಸಿಗೆ ಸಮಾಧಾನ ಇರಬೇಕು ಎಂದು ಕಿವಿ ಮಾತು ಹೇಳಿದರು.
ಜನಸಂಖ್ಯೆ ಹೆಚ್ಚಾದಂತೆ ಮುಂದಿನ ತಲೆಮಾರಿಗೆ ಶವಸಂಸ್ಕಾರಕ್ಕೂ ಸ್ಥಳ ಸಿಗುವುದು ಅನುಮಾನ. ಜನಸಂಖ್ಯೆ ಹೆಚ್ಚಳದಿಂದ ಮಾನವ ಸಂಪನ್ಮೂಲ ಹೆಚ್ಚಾಗಲಿದ್ದು, ಇದರಿಂದ ದೇಶದ ಅಭಿವೃದ್ಧಿಗೆ ಶ್ರಮಿಸಲು ಪಣ ತೊಡಬೇಕು ಎಂದರು