ಕಲ್ಪತರು ನಾಡಿಗೆ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ

3333333
Published on

ತುಮಕೂರು: ಮಂಡ್ಯ ನಗರದಲ್ಲಿ ಡಿಸೆಂಬರ್​ 20 ರಿಂದ 22ರ ವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮ್ಮೇಳನ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಶನಿವಾರ ತುಮಕೂರಿಗೆ ಆಗಮಿಸಿತು.

ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ನೇತೃತ್ವದಲ್ಲಿ ರಥಯಾತ್ರೆಯನ್ನು ಬರಮಾಡಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ತುಮಕೂರು ಜಿಲ್ಲೆಯೂ ಭಾಗಿಯಾಗಲಿದೆ ಎಂದು ಘೋಷಿಸಿದರು.

ರಾಜ್ಯದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಭುವನಗಿರಿಯ ನಾಡದೇವತೆ ಶ್ರೀಭುವನೇಶ್ವರಿ ದೇವಿಯ ದೇವಾಲಯದಿಂದ ಹೊರಟಿರುವ ರಾಜ್ಯದಾದ್ಯಂತ ಸಂಚರಿಸಿ ನಗರಕ್ಕೆ ಆಗಮಿಸಿದ ರಥಯಾತ್ರೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಭವ್ಯ ಸ್ವಾಗತ ಕೋರಲಾಯಿತು. ಕನ್ನಡ ಜ್ಯೋತಿ ರಥದಲ್ಲಿದ್ದ ಭುವನೇಶ್ವರಿ ದೇವಿಗೆ ಪುಷ್ಪಮಾಲಿಕೆ ಅರ್ಪಿಸಿ ಆರತಿ ಬೆಳಗಲಾಯಿತು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರಕ್ಕೆ ಆಗಮಿಸಿರುವ ಕನ್ನಡ ಜ್ಯೋತಿ ರಥಯಾತ್ರೆಯು ಜಿಲ್ಲೆಯಲ್ಲಿ ನವೆಂಬರ್​ 18ರವರೆಗೆ ಸಂಚರಿಸಿ ಕನ್ನಡದ ನೆಲ, ಜಲ, ಸಂಸ್ಕತಿಯ ಕಂಪನ್ನು ಪಸರಿಸಲಿದೆ. ರಥಯಾತ್ರೆಯು ಸಮ್ಮೇಳನದ ಉದ್ಘಾಟನೆ ದಿನದಂದು ಮಂಡ್ಯ ನಗರವನ್ನು ತಲುಪಲಿದ್ದು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಲಿ ಎಂದು ಸಿದ್ಧಲಿಂಗಪ್ಪ ಹಾರೈಸಿದರು.

ವೀರಗಾಸೆ ಕುಣಿತದ ಮೂಲಕ ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಬಿಜಿಎಸ್​ ವೃತ್ತದವರೆಗೂ ಸಾಗಿ ಗುಬ್ಬಿ ತಾಲೂಕಿಗೆ ತೆರಳಿ ಚೇಳೂರಿನಲ್ಲಿ ತಂಗಿದೆ. ಭಾನುವಾರ ಬೆಳಗ್ಗೆ ಪ್ರಯಾಣ ಮುಂದುವರಿಸಲಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​, ಅಪರ ಜಿಲ್ಲಾಧಿಕಾರಿ ಡಾ.ಎನ್​ ತಿಪ್ಪೇಸ್ವಾಮಿ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಶಬ್ಬೀರ್​ ಅಹಮದ್​ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಮೈಲಾರಪ್ಪ, ಪ್ರಕಾಶ್​, ಸುರೇಶ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net