ಜೆಜೆಎಂ ಕಾಮಗಾರಿಯೇ ಇಲ್ಲದೆ ಅನುದಾನ ಬಿಡುಗಡೆ! ಇಂಜಿನಿಯರ್​, ಗುತ್ತಿಗೆದಾರರ ರಕ್ಷಣೆ?

jjm story
ಪೈಪ್​ ಲೈನ್​ ಕೆಲಸ ಮಾಡುತ್ತಿರುವುದು.
Published on

ತುಮಕೂರು: ಜಿಲ್ಲೆಯಲ್ಲಿ ಹಳ್ಳಹಿಡಿದಿರುವ ಜಲ್​ ಜೀವನ್​ ಮಿಷನ್​ ಯೋಜನೆಗೆ ಹಿಡಿದಿರುವ ಗ್ರಹಣ ಬಿಡಿಸಲು ಹಣಕಾಸಿನ ತೊಂದರೆ ಎದುರಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಕೂಡ ಅನುದಾನವಿಲ್ಲದೆ ಯೋಜನೆ ಸಾಕಾರ ಸಾಧ್ಯವಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸೋಮವಾರ ನಗರದ ಜಿಪಂ ಸಭಾಂಗಣದಲ್ಲಿ ಜೆಜೆಎಂ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಕರೆದಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಗತಿಯಾಗಿರುವ ಕಾಮಗಾರಿಗೆ ಇನ್ನೂ 200ಕೋಟಿ ರೂ. ಅನುದಾನದ ಅಗತ್ಯವಿದ್ದು ಕೇಂದ್ರ ಸರ್ಕಾರ 2025ಕ್ಕೆ ಯೋಜನೆ ಪೂರ್ಣಗೊಳಿಸಿದ್ದು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ಪೂರ್ಣಗೊಳಿಸಲು ಸೂಚಿಸಿರುವುದು ಯೋಜನೆಗೆ ಹಣದ ಕೊರತೆ ತಂದೊಡ್ಡಿದೆ ಎಂದರು.

ಜಿಲ್ಲೆಯಲ್ಲಿ 3699 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದರೂ ಇನ್ನೂ 1700 ಕಾಮಗಾರಿಗಳು ಪೂರ್ಣಗೊಂಡಿಲ್ಲ, ಶೇ.20ರಷ್ಟು ಮಾತ್ರ ಆರ್ಥಿಕ ಪ್ರಗತಿಯಾಗಿದೆ. ಆರಂಭಿಸಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿಲ್ಲ, ಕಾರ್ಯಾದೇಶ ನೀಡಿ ಒಂದು ವರ್ಷವಾಗಿರುವ 953 ಹಾಗೂ ಎರಡು ವರ್ಷಗಳಾಗಿರುವ 269 ಕಾಮಗಾರಿಗಳು ಮುಗಿದಿಲ್ಲ ಎಂಬ ಆಘಾತಕಾರಿ ಅಂಕಿ, ಅಂಶದ ಬಗ್ಗೆ ಸಭೆಯಲ್ಲಿ ದಿಗ್ಭ್ರಮೆ ವ್ಯಕ್ತವಾಯಿತು.

ಜಿಪಂ ಸಿಇಒ ಬಿಲ್​ಗಳನ್ನು ನೀಡಲು ಅನಗತ್ಯ ವಿಳಂಭ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರು ದೂರುತ್ತಿದ್ದಾರೆ ಎಂದು ಶಾಸಕ ಕೆ.ಷಡಕ್ಷರಿ ದೂರಿದರು. ಗುತ್ತಿಗೆ ಪ್ರಕ್ರಿಯೆ ತಡವಾಗುತ್ತಿದೆ, ವರ್ಕ್​ಸ್ಲಿಪ್​, ಇಒಟಿಗೆ ಇಂಜಿನಿಯರ್​ಗಳು ತಡಮಾಡುತ್ತಿರುವುದರಿಂದ ಬಿಲ್​ ನೀಡಲು ತಡವಾಗುತ್ತಿದೆ ಎಂದು ಜಿ.ಪ್ರಭು ಸ್ಪಷ್ಟನೆ ನೀಡಿದರು.

ಕೇಂದ್ರ ಸರ್ಕಾರ ಜೆಜೆಎಂ ಯೋಜನೆಯನ್ನು 2025ಕ್ಕೆ ಮುಗಿಸಿದ್ದು 2028ರ ವರೆಗೂ ವಿಸ್ತರಿಸುವುದಾಗಿ ಬಜೆಟ್​ನಲ್ಲಿ ಘೋಷಿಸಿದ್ದಾರೆ ಆದರೆ, ಕ್ಯಾಬಿನೆಟ್​ನಲ್ಲಿ ಇದಕ್ಕೆ ಒಪ್ಪಿಗೆ ನೀಡಿಲ್ಲವಾದ್ದರಿಂದ ಸಧ್ಯಕ್ಕಂತೂ ಕೇಂದ್ರ ಸರ್ಕಾರದಿಂದ ಅನುದಾನ ನಿರೀಸಲು ಸಾಧ್ಯವಿಲ್ಲ, ಜಿಲ್ಲೆಯಲ್ಲಿ ಬಾಕಿ ಇರುವ 180ಕೋಟಿ ರೂ. ಬಿಲ್​ಗೆ ರಾಜ್ಯ ಸರ್ಕಾರವೇ ವಿಶೇಷ ಅನುದಾನ ಒದಗಿಸಬೇಕು ಎಂದು ದೆಹಲಿ ವಿಶೇಷ ಟಿ.ಬಿ.ಜಯಚಂದ್ರ ಸಲಹೆ ನೀಡಿದರು.

ಸಭೆಯಲ್ಲಿ ತುಮಕೂರು ಗ್ರಾಮಾಂತರ, ತಿಪಟೂರು ಹಾಗೂ ಶಿರಾ ತಾಲೂಕಿಗೆ ಸಂಬಂಧಪಟ್ಟಂತೆ ಚರ್ಚೆ ನಡೆಯಿತು. ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ನಮ್ಮಲ್ಲೇನು ತೊಂದರೆಯಿಲ್ಲ ಎಂದರು. ಶಾಸಕರಾದ ಬಿ.ಸುರೇಶ್​ಗೌಡ, ಕೆ.ಷಡಕ್ಷರಿ, ಜಿ.ಬಿ.ಜ್ಯೋತಿಗಣೇಶ್​ ಮಾತ್ರ ಹಾಜರಿದ್ದು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಉಳಿದ ಯಾವ ಶಾಸಕರೂ ವಿಶೇಷ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಕೆಲಸವನ್ನೇ ಮಾಡದೆ ಶೇ.90ರಷ್ಟು ಹಣ ಬಿಡುಗಡೆ! ಜೆಜೆಎಂ ಕಾಮಗಾರಿ ಹೆಸರಿನಲ್ಲಿ ಕೋಟ್ಯಾಂತರ ರೂ. ಲೂಟಿಯಾಗಿರುವುದು ಸಭೆಯಲ್ಲಿಯೂ ಚರ್ಚೆಯಾಯಿತು, ತುಮಕೂರು ತಾಲೂಕಿನಲ್ಲಿಯೇ 54 ಗ್ರಾಮಗಳಲ್ಲಿ ನಯಾಪೈಸೆಯ ಕಾಮಗಾರಿಯನ್ನು ಮಾಡದೆ ಶೇ.90ರಷ್ಟು ಹಣವನ್ನು ಇಂಜಿನಿಯರ್​ ಹಾಗೂ ಗುತ್ತಿಗೆದಾರರು ಸೇರಿಕೊಂಡು ಲೂಟಿ ಮಾಡಿರುವ ಬಗ್ಗೆ ಇಇ ಸಭೆಯಲ್ಲಿ ಮಾಹಿತಿ ನೀಡಿದರು. ಹಣ ಪಡೆದು ಕೆಲಸ ಪೂರ್ಣಗೊಳಿಸದ ನಾಲ್ವರು ಗುತ್ತಿಗೆದಾರರು ಹಾಗೂ ಬಿಲ್​ ಬರೆದುಕೊಟ್ಟಿರುವ ಸಂಬಂಧಪಟ್ಟ ಎಇ, ಎಇಇ ಹಾಗೂ ಇಇ ರವೀಶ್​ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿ ಪೊಲೀಸ್​ ಠಾಣೆಯಲ್ಲಿ ಕ್ರಿಮಿನಲ್​ ಮೊಕದ್ದಮೆ ದಾಖಲಿಸಬೇಕು ಎಂದು ಸಚಿವ ಡಾ.ಜಿ.ಪರಮೇಶ್ವರ್​ ಸೂಚಿಸಿದರು. ಈ ಬಗ್ಗೆ ಸಾಕಷ್ಟು ಸಲ ಸೂಚನೆ ನೀಡಿದರೂ ಇಇ ಕೆಲಸ ಮಾಡುತ್ತಿಲ್ಲ ಎಂದು ಜಿಪಂ ಸಿಇಒ ಜಿ.ಪ್ರಭು ದೂರಿದರು. ಮುಂದಿನ ಒಂದು ವಾರದಲ್ಲಿ ಕ್ರಿಮಿನಲ್​ ಮೊಕದ್ದಮೆ ದಾಖಲಾಗದಿದ್ದರೆ ನಿಮ್ಮ ವಿರುದ್ಧ ಕೈಗೊಳ್ಳಲಾಗುವುದು ಎಂದು ಇಇ ಕುಮಾರಸ್ವಾಮಿಗೆ ಸಚಿವರು ಗಡುವು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net