

ತುಮಕೂರು: ಮಾಜಿ ಸಚಿವ ಜನಾರ್ಧನರೆಡ್ಡಿ ಹೊಸ ಪಕ್ಷ ಘೋಷಣೆ ಆಶ್ಚರ್ಯ ಮೂಡಿಸಿದ್ದು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರೆಡ್ಡಿ ಅವರು ಹೊಸ ಪಕ್ಷ ಘೋಷಣೆ ಮಾಡಿರುವ ವಿಷಯ ಮಾಧ್ಯಮಗಳ ಮೂಲಕ ನಮಗೂ ಗೊತ್ತಾಗಿದೆ, ಯಾವುದೇ ರಾಜ್ಯದಲ್ಲಿಯೂ ಹೊಸ ಪಕ್ಷಗಳಿಗೆ ಭವಿಷ್ಯವಿಲ್ಲ ಎಂಬ ಸ್ಥಿತಿಯಲ್ಲಿ ಹೊಸ ಪಕ್ಷ ಘೋಷಣೆ ಆಶ್ಚರ್ಯ ಮೂಡಿಸಿದೆ ಎಂದರು.
ರೆಡ್ಡಿಯವರು ಹೊಸ ಪಕ್ಷ ಘೋಷಣೆ ಮಾಡುತ್ತಾರೆ ಎಂದು ಕಳೆದೊಂದು ವಾರದಿಂದ ಸುದ್ದಿಯಲ್ಲಿತ್ತು. ರಾಜಕಾರಣದಲ್ಲಿ ಇವತ್ತು ಯಾವುದೇ ರಾಜ್ಯದಲ್ಲಿ ಎರಡು ಅಥವಾ ಮೂರು ಪಕ್ಷ ಮೀರಿ, ಬೇರೆ ಪಕ್ಷಗಳು ಅಷ್ಟೊಂದು ಸ್ವಾಭಾವಿಕವಾಗಿ ಬೆಳವಣಿಗೆಯಾಗಿಲ್ಲ ಎಂದರು.
ಅವರು ಯಾವ ಉದ್ದೇಶದಿಂದ ಇನ್ನೋಂದು ರಾಜಕೀಯ ಪಕ್ಷ ಮಾಡಲಿಕ್ಕೆ ಹೊರಟರೂ ನಮಗೇನು ಮಾಹಿತಿ ಇಲ್ಲ, ಅವರು ನನಗೂ ಒಳ್ಳೆ ಸ್ನೇಹಿತರು, ಅವರೊಂದಿಗೆ ಮಾತನಾಡಿಸಿ ಕೇಳುತ್ತೇವೆ ಎಂದರು.
ನಮ್ಮ ದೃಷ್ಠಿಯಲ್ಲಿ ನಮ್ಮ ಪಕ್ಷದಲ್ಲಿದ್ದವರೇ ಹೊಸ ಪಕ್ಷ ಸ್ಥಾಪಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ, ನಾಳೆಯಿಂದಲೇ ಪ್ರಯತ್ನ ಮಾಡಿ ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ ಎಂದರು.