

ತಿಪಟೂರು: ಆರೋಗ್ಯ ಕೆಟ್ಟ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕಿಯ ಸಂಶೋಧನಾ ಕೇಂದ್ರ ತಾಲೂಕಿನಲ್ಲಿ ಹಮ್ಮಿಕೊಂಡಿರುವ ಆರೋಗ್ಯದ ನಡೆ, ಹಳ್ಳಿಗಳ ಕಡೆ ಕಾರ್ಯಕ್ರಮ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲರಿಗೂ, ಎಲ್ಲ ಕಾಲಕ್ಕೂ ವೈದ್ಯಕಿಯ ಸೇವೆ ಲಭ್ಯವಾಗಬೇಕೆಂಬ ದೃಷ್ಟಿಯಿಂದ ಕರುಣಾ ಟ್ರಸ್ಟ್ ತಾಲೂಕಿನ ಮೂರು ಗ್ರಾಮಗಳಲ್ಲಿ 24 ಗಂಟೆ ವೈದ್ಯಕಿಯ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಿದೆ. ಎಂ.ಎಸ್.ರಾಮಯ್ಯ ವೈದ್ಯಕಿಯ ಸಂಶೋಧನಾ ಸಂಸ್ಥೆ, ಕಳೆದ ವರ್ಷ ತಿಪಟೂರು ತಾಲೂಕಿನ ಬಳವನೇರಲು ಗ್ರಾಮ ಆಯ್ಕೆ ಮಾಡಿಕೊಂಡು, ಅಲ್ಲಿನ 250ಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿ, ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿರುವವರನ್ನು ಗುರುತಿಸಿ, ಅವರ ಆಹಾರ ಪದ್ಧತಿ, ಊಟಕ್ಕೂ ಮುಂಚೆ ಮತ್ತು ಊಟದ ನಂತರ ಅವರ ದೈನಂದಿನ ಚಟುವಟಿಕೆಗಳು ಹೇಗಿರುತ್ತವೆ ಎಂಬ ಬಗ್ಗೆ ಸಂಶೋಧನೆ ನಡೆಸಿ, ವೈದ್ಯಕಿಯ ಚಿಕಿತ್ಸೆ ಇಲ್ಲದೆ, ಕೇವಲ ಆಹಾರ ಪದ್ಧತಿಯಲ್ಲಿ ಸೂಕ್ತ ಮಾರ್ಪಾಡು ಮಾಡುವ ಮೂಲಕ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಡಿಮೆ ಮಾಡುವ ಪ್ರಯತ್ನ ಮತ್ತು ಸಂಶೋಧನೆ ನಡೆಸಿದೆ ಎಂದರು.
ಮೆಡಿಕಲ್ ಕಾಲೇಜಿನ ಡೀನ್ ಹಾಗೂ ಪ್ರಾಂಶುಪಾಲರಾದ ಡಾ.ವೇದ ವೈ.ರಾವ್, ಉಪ ಪ್ರಾಂಶುಪಾಲರಾದ ಡಾ.ಶಾಲಿನಿ ಸಿ.ನೂಯಿ. ಡಾ. ನಯಂಜಿಕ್ ಚೌದರಿ, ಡಾ.ಹರೀಶ್, ಡಾ.ರಾಮಚಂದ್ರ ಕಾಮತ್, ಡಾ.ಅರುಣ ಸಿ. ರಮೇಶ್, ಜಿಲ್ಲಾ ಆರೋಗ್ರಾಧಿಕಾರಿ ಡಾ.ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಟಿ.ಎನ್. ರವಿಕುಮಾರ್, ಸಿಡಿಪಿಒ ಪಿ.ಓಂಕಾರಪ್ಪ, ನಗರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಕುಮಾರ್ ಇದ್ದರು.
ಆಶಾ ಕಾರ್ಯಕರ್ತೆಯರ ಸಹಕಾರ ಅಗತ್ಯ: ಕಲ್ಪವೃಕ್ಷ ಎಂದರೆ ಸದಾ ಸಂಪತ್ತಿರುವ ಪ್ರದೇಶ, ಇಲ್ಲಿ ಆರೋಗ್ಯದ ಸಂಪತ್ತಿರಬೇಕೆಂಬುದು ನಮ್ಮ ಆಶಯ ಎಂದು ಎಂ.ಎಸ್.ರಾಮಯ್ಯ ವೈದ್ಯಕಿಯ ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಆರ್.ಜಯರಾಂ ಹೇಳಿದರು. ಎಲ್ಲರ ಆರೋಗ್ಯ ಬಯಸುವ ನಮಗೆ ಇದರ ಪ್ರಮುಖ ರೂವಾರಿಗಳಾದ ಆಶಾ ಕಾರ್ಯಕರ್ತರ ಸಹಾಯ ಸಿಕ್ಕರೆ ನಮ್ಮ ಪ್ರಯತ್ನಕ್ಕೆ ಇನ್ನೂ ಹೆಚ್ಚಿನ ಯಶಸ್ಸು ಸಿಗುತ್ತದೆ, ಎಷ್ಟೋ ಕಡೆ ಸಮಾಜ ಜಾರಿದರೂ, ನಿಮ್ಮ ಕರ್ತವ್ಯ ನೀವು ಬಿಟ್ಟಿಲ್ಲ. ಸರ್ಕಾರ ರೂಪಿಸಿರುವ ಮಾನದಂಡಗಳ ಪ್ರಕಾರ ನಮ್ಮಲ್ಲಿ ಬರುವ ರೋಗಿಗಳಿಂದ ಹೆಚ್ಚಿನ ಬಿಡಿಗಾಸು ಪಡೆಯದೇ ಚಿಕಿತ್ಸೆ ನೀಡಲಾಗುವುದು. ನಾವು ಊಟದ ಜತೆಗೆ ಚಿಕಿತ್ಸೆಯನ್ನೂ ನೀಡಿ, ರೋಗಿಯನ್ನು ಮನೆಗೆ ಕಳಿಸುತ್ತೇವೆ ಎಂದರು.
ಕಾಯಿಲೆಗೆ ಜಾತಿ, ಅಂತಸ್ತಿಲ್ಲ. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಜತೆಗೆ ಅವರು ಆಡುವ ಭಾಷೆಯಿಂದ ರೋಗಿ ಬೇಗ ಚೇತರಿಸಿಕೊಳ್ಳುತ್ತಾನೆ. ಇಲ್ಲಿ ಬದುಕುವ ಆಸೆ ತುಂಬಿಕೊಡಲಾಗುತ್ತೆ.
>ಅರುಣ, ಚಿಕಿತ್ಸೆ ಪಡೆದ ರೋಗಿ