ತುಮಕೂರು ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ಘೋರ ಅನ್ಯಾಯ!; 25 ಸಾವಿರ ಕ್ವಿಂಟಾಲ್ ಕೊಬ್ಬರಿಗೆ ಕೊಕ್

COPRA_1111
Published on

ಸೋರಲಮಾವು ಶ್ರೀಹರ್ಷ
ತುಮಕೂರು: ಜಿಲ್ಲೆಯ ಕೊಬ್ಬರಿ ಬೆಳೆಗಾರರಿ ಮತ್ತೊಂದು ಮರ್ಮಾಘಾತ ಎದುರಾಗಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ಕೊಬ್ಬರಿ ಖರೀದಿ ಮಿತಿಯಲ್ಲಿ ಬದಲಾಯಿಸಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿದ್ದು ಜಿಲ್ಲೆಗೆ ಬರೋಬ್ಬರಿ 25 ಸಾವಿರ ಕ್ವಿಂಟಾಲ್ ಕಡಿತಮಾಡಿದೆ.

ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಜೆ.ಎನ್.ಧನಲಕ್ಷ್ಮೀ ಮಾ.6ರಂದು ಮಾರ್ಪಾಡು ಆದೇಶ ಹೊರಡಿಸಿದ್ದು ಜಿಲ್ಲೆಯ ರೈತರಿಗೆ ಅನ್ಯಾಯವಾದಂತಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.40ರಷ್ಟು ಗರಿಷ್ಟ ಮಿತಿ ದಾಟಿದ್ದು ಸಾಕಷ್ಟು ಬಡ ರೈತರು ಯೋಜನೆಯಿಂದ ವಂಚಿತರಾಗುವ ಆತಂಕ ಎದುರಾಗಿದೆ.

ಪರಿಷ್ಕೃತ ಆದೇಶದಲ್ಲಿ ತುಮಕೂರು ಜಿಲ್ಲೆಯ ಕೋಟಾದಲ್ಲಿ ಬರೋಬ್ಬರಿ 25 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು ಕಿತ್ತುಕೊಳ್ಳಲಾಗಿದ್ದು ಹಾಸನ ಜಿಲ್ಲೆಗೆ ಹೆಚ್ಚುವರಿಯಾಗಿ 25 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಿರುವುದು ಜಿಲ್ಲೆಯಲ್ಲಿ ಆಕ್ರೋಶ ಬುಗಿಲೇಳುವಂತೆ ಮಾಡಿದೆ.

ತೆಂಗು ಬೆಳೆಯುವ ಪ್ರದೇಶ ಹಾಗೂ ಕೊಬ್ಬರಿ ಉತ್ಪಾದನೆ ಪ್ರಮಾಣದ ಆಧಾರದ ಮೇಲೆ ಈ ಹಿಂದಿನ ಆದೇಶದಂತೆ ತುಮಕೂರು ಜಿಲ್ಲೆಗೆ 3.50 ಲಕ್ಷ ಕ್ವಿಂಟಾಲ್ ಕೊಬ್ಬರಿಗೆ ಅವಕಾಶ ನೀಡಲಾಗಿತ್ತು. ಹಾಸನ ಜಿಲ್ಲೆಯ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ 25 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು ಕಡಿತ ಮಾಡಿರುವುದು ಘೋರ ಅನ್ಯಾಯ ಎನ್ನಿಸಿದೆ.

ಪ್ರಸ್ತುತ ತುಮಕೂರು ಜಿಲ್ಲೆಗೆ 2.50 ಲಕ್ಷ ಕ್ವಿಂಟಾಲ್, ಹಾಸನಕ್ಕೆ 1.75 ಕ್ವಿಂಟಾಲ್, ಮಂಡ್ಯ, ಚಿತ್ರದುರ್ಗಕ್ಕೆ ತಲಾ 40 ಸಾವಿರ, ಚಿಕ್ಕಮಗಳೂರು 55 ಸಾವಿರ, ಮೈಸೂರು 5 ಸಾವಿರ, ದಕ್ಷಿಣ ಕನ್ನಡ 1000, ರಾಮನಗರ 25000 ಹಾಗೂ ಚಾಮರಾಜನಗರಕ್ಕೆ 1500 ಕ್ವಿಂಟಾಲ್ ಒಟ್ಟು 692500 ಕ್ವಿಂಟಾಲ್ ಕೊಬ್ಬರಿ ಖರೀದಿಯ ಮಿತಿಗೊಳಿಸಲಾಗಿದೆ.

ಜಿಲ್ಲೆಯ ಜನಪ್ರತಿನಿಧಿಗಳು ಅಸಹಾಯಕರು!?

ತುಮಕೂರು ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ಕಣ್ಣಿಗೆ ಕಾಣುವಂತೆಯೇ ಮೋಸವಾಗುತ್ತಿದ್ದರೂ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಜಾಣಮೌನ ವಹಿಸಿರುವುದು ಆಶ್ಚರ್ಯ ಮೂಡಿಸಿದೆ.
ವೈಜ್ಞಾನಿಕವಾಗಿ ನಿಗದಿಪಡಿಸಲಾಗಿದ್ದು ಖರೀದಿ ಮಿತಿಯನ್ನು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬದಲಾಯಿಸಿದ್ದರೂ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಗಳೂ ದನಿಎತ್ತದಿರುವುದು ರೈತರ ಆಕೋಶವನ್ನು ಹೆಚ್ಚಿಸಿದ್ದು ಗುರುವಾರದಿಂದಲೇ ಜನರೇ ಬೀದಿಗಳಿಯಲಿದ್ದಾರೆ.
ಜನರೊಂದಿಗೆ ನಿಲ್ಲಬೇಕಿರುವ ಚುನಾಯಿತ ಜನಪ್ರತಿನಿಧಿಗಳು ರಾಜಕೀಯದಲ್ಲಿ ಮುಳುಗಿದ್ದು ತೆಂಗು ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ.

ಪರಿಷ್ಕೃತ ಆದೇಶದಲ್ಲಿ ಜಿಲ್ಲೆಗೆ ಮೀಸಲಿದ್ದ ಮಿತಿಯಲ್ಲಿ 25 ಸಾವಿರ ಕ್ವಿಂಟಾಲ್ ಕಡಿಮೆ ಮಾಡಿರುವುದು ಗಮನಿಸಿದ್ದೇನೆ ಆದರೆ, ಬೇರೆ ಜಿಲ್ಲೆಯವರಿಗೂ ಮಿತಿ ಹೆಚ್ಚಿಸಿಕೊಳ್ಳಲು ಹಕ್ಕು ಇದ್ದು, ಸರ್ಕಾರದ ಮೇಲೆ ಒತ್ತಡ ತಂದು ಮಾಡಿಸಿಕೊಂಡಿದ್ದಾರೆ. ಈಗ ಇರುವ ಮಿತಿಯನ್ನೇ ಖಾಲಿ ಮಾಡಲಿ ನಂತರ ಹೆಚ್ಚಿಸುವ ಬಗ್ಗೆ ಚಿಂತಿಸೋಣ.ಕೆ.ಷಡಕ್ಷರಿಶಾಸಕ, ತಿಪಟೂರು https://www.vijayavani.net/tumakuru-purchase-limit-in-the-district-most-popular-place-in-the-state

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net