

ತುಮಕೂರು: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದ ದಿನವೇ ಹಾಲಿ ಗ್ರಾಪಂ ಅಧ್ಯಕ್ಷೆ ನಿಧನರಾಗಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ದೊಡ್ಡಎಣ್ಣೇಗೆರೆಯಲ್ಲಿ ನಡೆದಿದೆ.
ದೊಡ್ಡಎಣ್ಣೇಗೆರೆ ಗ್ರಾಪಂ ಅಧ್ಯಕ್ಷೆ ರಮ್ಯ(30) ಹೃದಯಾಘಾತದಿಂದ ನಿಧನರಾದರು. ಗ್ರಾಪಂ ಮೊದಲ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದ ರಮ್ಯಾ ಎರಡನೇ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆಯುತ್ತಿದ್ದ ಚುನಾವಣೆಯಲ್ಲಿ ಬುಧವಾರ ಭಾಗವಹಿಸಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆ ಆರಂಭವಾದ ಕೂಡಲೇ ಅಧ್ಯಕ್ಷೆ ರಮ್ಯ ಎದೆ ನೋವು ಎಂದು ಸ್ಥಳದಲ್ಲಿಯೇ ಕುಸಿದು ಬಿದ್ದರು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು.
ಬುಧವಾರ ಬೊಮ್ಮೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಪತಿ ಮಂಜುನಾಥ್ ಅವರನ್ನು ಅಗಲಿದ್ದಾರೆ.