ರಜೆ ಮಾಡಿದ ಆಸ್ಪತ್ರೆಗಳಿಗೆ ನೋಟಿಸ್​: ಆದೇಶದಂತೆ ಕಾರ್ಯನಿರ್ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸುತ್ತೋಲೆ

2
Published on

ತುಮಕೂರು: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸದಿರುವ ಪ್ರಕರಣವನ್ನು ಜಿಲ್ಲಾ ಆರೋಗ್ಯಾಧಿಕಾರಿ ಗಂಭೀರವಾಗಿ ಪರಿಗಣಿಸಿ ನೋಟಿಸ್​ ಜಾರಿಗೊಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು 24/7 ಕಾರ್ಯನಿರ್ವಹಿಸಬೇಕಿದ್ದು ಎಲ್ಲ ಆಸ್ಪತ್ರೆಗಳಲಿಯೂ ನಾಮಫಲಕ ಕೂಡ ಹಾಕಲಾಗಿದೆ. ಆದರೆ, ರಜೆ ದಿನಗಳಲ್ಲಿ ಇತರ ಸರ್ಕಾರಿ ಕಚೇರಿಗಂತೆ ಸೇವೆ ಸ್ಥಗಿತ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಬಂದಿದ್ದವು.

ರಜೆ ದಿನಗಳಲ್ಲಿ ಸಾರ್ವಜನಿಕರಿಗೆ ಕನಿಷ್ಠ ಪ್ರಥಮ ಚಿಕಿತ್ಸೆ ಕೂಡ ಸಿಗದೇ ತೊಂದರೆ ಅನುಭವಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಇಲಾಖೆಯ ಮಾರ್ಗಸೂಚಿಯಂತೆ ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ 24/7 ಪ್ರಾಥಮಿಕ ಆರೋಗ್ಯ ಕೆಂದ್ರಗಳನ್ನು ತೆರೆದು ಸೇವೆಗೆ ಲಭ್ಯವಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್​ ಜು.14ರಂದು ಸುತ್ತೋಲೆ ಹೊರಡಿಸಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತ ಹಾಗೂ ಹುಚ್ಚುನಾಯಿ ಕಡಿತಕ್ಕೆ ಔಷಧ ಲಭ್ಯವಿಲ್ಲದಿರುವುದು ಅನೇಕ ಸಾವುಗಳಿಗೆ ಕಾರಣವಾಗುತ್ತಿದೆ.
ಕಳೆದೊಂದು ವಾರದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಪಿಎಚ್​ಸಿ ವ್ಯಾಪ್ತಿಯಲ್ಲಿ ಮೂವರಿಗೆ ಹಾವು ಕಡಿದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಿಯವಾಗಿಯೇ ಚಿಕಿತ್ಸೆ ಲಭ್ಯವಿದ್ದರೆ ಸಾವುಗಳನ್ನು ಕಡಿಮೆಗೊಳಿಸಲು ಸಾಧ್ಯವಿದ್ದು ಔಷಧ ಪೂರೈಕೆಗೆ ಆಗ್ರಹ ಕೇಳಿಬಂದಿದೆ.

ಇನ್ನೂ ನಾಯಿ ಕಡಿತಕ್ಕೂ ಸ್ಥಳಿಯ ಆಸ್ಪತ್ರೆಗಳಲ್ಲಿ ಔಷಧ ಲಭ್ಯವಿಲ್ಲ. ತಾಲೂಕು ಆಸ್ಪತ್ರೆಗಳಲ್ಲಿಯೂ ಔಷಧ ಸಿಗದೆ ಜನರು ಪರದಾಡುವ ಸ್ಥಿತಿಯಿದೆ. ಹುಚ್ಚು ನಾಯಿ ಕಡಿತಕ್ಕೆ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿಯೂ ಔಷಧ ಸಿಗದೆ, ಖಾಸಗಿ ಆಸ್ಪತ್ರೆಯಲ್ಲಿ ದುಭಾರಿ ಹಣ ತೆತ್ತು ಔಷಧ ಪಡೆಯುವ ಅನಿವಾರ್ಯತೆಯಿದೆ.

ಡಾ.ಮಂಜುನಾಥ್​ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net