

ತುಮಕೂರು: ಆರೋಗ್ಯ ತುಮಕೂರು ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲಿ ಜಿಪಂ ವತಿಯಿಂದ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ಜಿ.ಪ್ರಭು ತಿಳಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಎನ್ಜಿಒ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ತುಮಕೂರು ಅಭಿಯಾನದಡಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದ್ದು, 5500 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವುದು ಕಂಡು ಬಂದಿದ್ದು, ಆಗಸ್ಟ್ನಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ 1000 ಮಂದಿಯ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯ ತುಮಕೂರು ಅಭಿಯಾನದ ಭಾಗವಾಗಿ ಗ್ರಾಪಂ ಮಟ್ಟದಲ್ಲಿ ಈಗಾಗಲೇ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅಭಿಯಾನದಡಿ ಕಳೆದ ಡಿಸೆಂಬರ್ನಿಂದ ಈವರೆಗೆ 5,11,026 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ 30 ರ್ವಷ ಮೇಲ್ಪಟ್ಟ 3,75,695 ಜನರನ್ನು ತಪಾಸಣೆ ಮಾಡಲಾಗಿದೆ ಎಂದರು.
ಅಭಿಯಾನಡಿ 31,066 ಮಂದಿಯಲ್ಲಿ ಮಧುಮೇಹ ಹಾಗೂ 37965 ಜನರಲ್ಲಿ ಅಧಿಕ ರಕ್ತದೊತ್ತಡ ಇರುವುದು ಕಂಡುಬಂದಿದೆ. ಸಂಶಯಾತ್ಮಕವಾಗಿ 182 ಬಾಯಿ ಕ್ಯಾನ್ಸರ್, 67 ಸ್ತನ ಕ್ಯಾನ್ಸರ್, 79 ಗರ್ಭಕಂಠ ಕ್ಯಾನ್ಸರ್, 5555 ಕಣ್ಣಿನ ಪೊರೆ, 2978 ದೃಷ್ಠಿದೋಷ, 570 ರಕ್ತ ಹೀನತೆ, 849 (ಕಫ ಸಂಗ್ರಹಿಸಿರುವ) ಕ್ಷಯ, 974 ದಂತ ಜೋಡಣೆ, 187 ಕುಷ್ಟ ರೋಗಿಗಳ ಸಂಖ್ಯೆ ಇರುವುದು ತಪಾಸಣೆಯಲ್ಲಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಶ್ರದ್ಧಾ ಐ ಕೇರ್, ಮೋದಿ ಕಣ್ಣಿನ ಆಸ್ಪತ್ರೆ, ಶಂಕರ್, ಸಿದ್ದಗಂಗಾ, ಶ್ರೀದೇವಿ, ಸಿದ್ಧಾರ್ಥ, ವೆಸ್ಟ್ ಲಯನ್ಸ್, ಶಾರದ ದೇವಿ, ಎಂ ಎಸ್ ರಾಮಯ್ಯ, ಕಿಮ್ಸ್, ಏಮ್ಸ್, ನೇತ್ರದಿಪ್ ಸೇರಿ 13 ಎನ್ಜಿಒ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.