ಜನರು ಎದ್ದೇಳುವ ಮುಂಚೆಯೇ ಹಟ್ಟಿಯಲ್ಲಿ ಕಾಣಿಸಿಕೊಂಡ ಜಿಲ್ಲಾಧಿಕಾರಿ; ಕುಡಿವ ನೀರಿಗೆ ತಾತ್ಕಾಲಿಕ ಪರಿಹಾರ

DC_Bukkapatna.1
Published on

ತುಮಕೂರು:ಬರ ನಿರ್ವಹಣೆಗೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲೆಯಲ್ಲಿ ಹಳ್ಳಿಗಳಿಗೆ ಮಿಂಚಿನ ಸಂಚಾರ ಮುಂದುವರಿಸಿದ್ದು ಶನಿವಾರ ಬೆಳಗ್ಗೆಯೇ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಗ್ರಾಮಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ಜನರು ಎದ್ದೇಳುವ ಮುಂಚೆಯೇ ಮಾಳಿಗೆಹಟ್ಟಿ ಹಾಗೂ ಪುರ ಗ್ರಾಮಗಳಲ್ಲಿ ಶುಭಕಲ್ಯಾಣ್ ಅಧಿಕಾರಿಗಳೊಂದಿಗೆ ಆಗಮಿಸಿ ಸಮಸ್ಯೆ ಆಲಿಸಲಾರಂಭಿಸಿದರು.

ಕಾಡುಗೊಲ್ಲರೇ ತುಂಬಿರುವ 50 ಕುಟುಂಬಗಳಿರುವ ಮಾಳಿಗೆಹಟ್ಟಿಯಲ್ಲಿ ಕಳೆದ ಎರಡು ತಿಂಗಳಿಂದಲೂ ನೀರಿನ ಹಾಹಾಕಾರವಿದೆ. ಹಟ್ಟಿಯ ನೀರಿನ ಸಮಸ್ಯೆ ಬಗೆಹರಿಸುವಂತೆ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿಯೂ ಸಮಸ್ಯೆ ಜೀವಂತವಾಗಿಯೇ ಉಳಿದಿದೆ.

ವಿಷಯ ತಿಳಿದ ಜಿಲ್ಲಾಧಿಕಾರಿಯೇ ಗ್ರಾಮಕ್ಕೆ ಭೇಟಿ ನೀಡಿದ ಕೂಡಲೇ ಗ್ರಾಮಸ್ಥರು ಸಮಸ್ಯೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು ಸಾವಧಾನವಾಗಿಯೇ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಈವರೆಗೂ ಸಮಸ್ಯೆ ನಿವಾರಿಸದ ಗ್ರಾಪಂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಕೊಳವೆ ಬಾವಿ ಹೊಂದಿರುವ ರೈತರು ಮಾಸಿಕ ಬಾಡಿಗೆ ಆದರದ ಮೇಲೆ ನೀರು ಕೊಡುವಂತೆ ಮನವಿ ಮಾಡಿದರು. ಊರಿನ ಜಯಣ್ಣ ಎಂಬುವರರ ಮನವೊಲಿಸಿ ಕೊಳವೆ ಬಾವಿಯಿಂದ ಮುಂದಿನ ಮಳೆಗಾಲದವರೆಗೂ ನೀರು ಕೊಡುವ ಬಗ್ಗೆ ಒಮ್ಮತಕ್ಕೆ ಬರಲಾಯಿತು.

ಹಗಲು ಸಮಯದಲ್ಲಿ ಗ್ರಾಮಕ್ಕೆ ನೀರು ಕೊಡಲು ಒಪ್ಪಿಗೆ ಸೂಚಿಸಿದ ಜಯಣ್ಣನಿಗೆ ತಿಂಗಳಿಗೆ 18000 ರೂ ನೀರಿನ ಶುಲ್ಕ ನೀಡುವುದಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭರವಸೆ ನೀಡಿ ಸಮಸ್ಯೆಗೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net