

ತುಮಕೂರು: ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ನಿವೇಶನ ಒದಗಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಸೋಮವಾರ ಆನ್ಲೈನ್ ಮೂಲಕ ಅಧಿಕಾರಿಗಳ ಜತೆ ಆಯೋಜಿಸಿದ್ದ ಸಭೆಯಲ್ಲಿ ನಿವೇಶನ ಒದಗಿಸಿ ವರದಿ ನೀಡಬೇಕು ಎಂದು ಗ್ರಾಪಂ ಪಿಡಿಒಗಳಿಗೆ ಹೇಳಿದರು.
ಕನಿಷ್ಠ 20/30 ಅಳತೆಯ ನಿವೇಶನಗಳನ್ನು ಪಾಲಿಕೆ, ಸ್ಥಳಿಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿ ಹಾಗೂ ಆಯಾ ಗ್ರಾಪಂ ಪಿಡಿಒಗಳು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಬೇಕು ಎಂದರು.
15ನೇ ಹಣಕಾಸು ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಕುಡಿಯುವ ನೀರು, ಅಮೃತ್ ನಿರ್ಮಲ ನಗರ ಯೋಜನೆ, ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆಗಳಡಿ ನಿರೀತ ಪ್ರಗತಿ ಸಾಧಿಸುವಂತೆ ಎಲ್ಲ ಸ್ಥಳಿಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ನೋಟಿಸ್ ಅವಧಿಯ ಭೂಮಿ ಅರ್ಜಿಗಳನ್ನು 33 ದಿನದೊಳಗೆ ವಿಲೇವಾರಿ ಮಾಡದ ತಹಸೀಲ್ದಾರ್, ಕಂದಾಯ ನಿರೀಕ್ಷಕ, ಸರ್ವೇ ಸೂಪರ್ವೈಸರ್ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲೆಯಲ್ಲಿ 6850 ಪಹಣಿ ಕಾಲಂ 3/9 ಮಿಸ್ ಮ್ಯಾಚ್ ಪ್ರಕರಣಗಳಿದ್ದು, ಶ್ರೀ ವಿಲೇವಾರಿ ಮಾಡುವಂತೆ ತಹಸೀಲ್ದಾರ್ಗಳಿಗೆ ಸೂಚಿಸಿದರು.
ಕಂದಾಯ ಇಲಾಖೆಯ ಸರ್ಕಾರಿ ಭೂಮಿಯಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಕಾಯ್ದಿರಿಸಿ ಖಾತೆ ಮಾಡಿಸುವ ಕೆಲಸ ಪ್ರಗತಿಯಲ್ಲಿರುತ್ತದೆ. ತುಮಕೂರು, ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗದಿತ ನಮೂನೆಯಲ್ಲಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ತಾಲೂಕು ಕಚೇರಿ ಹಾಗೂ ಸಂಬಂಧಿಸಿದ ಗ್ರಾಪಂಗಳಿಗೆ ಸೂಚಿಸಿದರು.
ಉಪಉಪವಿಭಾಗಾಧಿಕಾರಿ ವಿ.ಅಜಯ್, ತಹಸೀಲ್ದಾರ್ ಮೋಹನಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮತ್ತಿತರರು ಇದ್ದರು.