ಸಂಚಲನ ಸೃಷ್ಟಿಸಿದ್ದ ಜಿಲ್ಲಾ ಬಿಜೆಪಿ ಒಬಿಸಿ ಸಭೆಯಲ್ಲಿ ನಡೆದ ರಹಸ್ಯ ಚರ್ಚೆ!?

BJP_OBC
Published on

ತುಮಕೂರು: ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಮುಖಂಡರು ಪಕ್ಷದ ಕಾರ್ಯಾಲಯ ಬಿಟ್ಟು ಖಾಸಗಿ ಹೋಟೆಲ್​ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು ಜಿಲ್ಲಾ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ ಒಬಿಸಿ ಮುಖಂಡರು, ಪಕ್ಷದ ನಾಯಕತ್ವದ ಬಗ್ಗೆ ಯಾವುದೇ ಅಸಮಾಧನವಿಲ್ಲ. ನಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ನಾವೆಲ್ಲಾ ಸೇರಿ ಚರ್ಚೆ ನಡೆಸಿದ್ದಾಗಿ ಜಾರಿಕೊಂಡಿದ್ದಾರೆ.

ಮುಂಬರುವ ಚುನಾವಣೆಗಳಲ್ಲಿ ಹಾಗೂ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಅವಕಾಶ ವಂಚಿತ ಸಮುದಾಯದ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್​.ಶಿವಪ್ರಸಾದ್​ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಸಣ್ಣಪುಟ್ಟ ಸಮಾಜದವರನ್ನು ಪಕ್ಷದ ತೆಕ್ಕೆಗೆ ತರಲು ಅವರಲ್ಲಿ ರಾಜಕೀಯ ಶಕ್ತಿ ತುಂಬುವ ಹಾಗೂ ಕೇಂದ್ರ ಸಕಾರದ ಜನಪರ ಯೋಜನೆಗಳನ್ನು ಗ್ರಾಮಮಟ್ಟಕ್ಕೆ ಕೊಂಡೊಯ್ದು ಜನರಿಗೆ ತಲುಪಿಸುವ ಸಂಬಂಧ ಬಿಜೆಪಿ ಓಬಿಸಿ ಮೋರ್ಚಾ ಮುಖಂಡರು ಸಭೆ ಸೇರಿ ಚರ್ಚಿಸಿದೆವು. ಈ ಸಭೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಯಾವುದೇ ಅಸಮಾಧಾನ ವ್ಯಕ್ತಪಡಿಸಿದ ಚರ್ಚೆಗಳಾಗಿಲ್ಲ. ಪಕ್ಷ ಸಂಟನೆಗೆ ಇನ್ನಷ್ಟು ಬಲ ತುಂಬುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದರು.

ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳು ಸೇರಿದ್ದ ಸಭೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಒಬಿಸಿ ವರ್ಗದಿಂದ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭ ಆಯೋಜಿಸುವ ಸಂಬಂಧ ಪೂರ್ವಭಾವಿ ಸಭೆ ಇದಾಗಿತ್ತು. ಇದರಲ್ಲಿ ಪಕ್ಷದ ನಾಯಕತ್ವ ವಿರುದ್ಧ ಯಾವುದೇ ಅಸಮಾಧಾನ ವ್ಯಕ್ತವಾಗಿಲ್ಲ ಎಂದು ತಿಳಿಸಿದರು.

ಹಿಂದುಳಿದ ವರ್ಗದಲ್ಲಿನ ಸಣ್ಣಪುಟ್ಟ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿ ತುಂಬುವುದರ ಜತೆಗೆ ರಾಜಕೀಯ ಅವಕಾಶ ಕಲ್ಪಿಸುವ ಕುರಿತು ಅಭಿಪ್ರಾಯಗಳು ಮೂಡಿಬಂದವು. ಮುಂಬರುವ ಚುನಾವಣೆಗಳಲ್ಲಿ ಹಾಗೂ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಅವಕಾಶ ವಂಚಿತ ಸಮುದಾಯದ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯ ವ್ಯಕ್ತವಾಯಿತು. ಈ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತರುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಶಿವಪ್ರಸಾದ್​ ಹೇಳಿದರು.

ಎಲ್ಲಾ ಜಾತಿಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿ ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಆ ನಿಗಮಗಳ ಶೇ.10ರಷ್ಟೂ ಹಣವನ್ನು ಕಾಂಗ್ರೆಸ್​ ಸರ್ಕಾರ ಆ ವರ್ಗದ ಜನರಿಗೆ ಬಳಿಕೆ ಮಾಡಿಲ್ಲ, ಇದರ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಕುರಿತೂ ಚರ್ಚೆ ಮಾಡಲಾಯಿತೇ ವಿನ ಯಾರ ವಿರುದ್ಧವೋ, ಪಕ್ಷ ಸಂಟನೆಯಲ್ಲಿ ಅನ್ಯಾಯವಾಗಿದೆ ಎಂಬ ಬಗ್ಗೆಯಾಗಲಿ ಯಾರೂ ಪ್ರಸ್ತಾಪಿಸಿಲ್ಲ. ಮಾಧ್ಯಮಗಳಿಗೆ ಸಭೆಯ ವಿಚಾರಗಳು ಸೋರಿಕೆ ಹೇಗಾಯಿತು ಎಂಬುದು ಗೊತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್​, ಮುಖಂಡರಾದ ಆಯರಹಳ್ಳಿ ಶಂಕರಪ್ಪ, ರುದ್ರೇಶ್​, ಮಲ್ಲಿಕಾರ್ಜುನ್​, ಅಣೆತೋಟ ಶ್ರೀನಿವಾಸ್​, ಬನಶಂಕರಿಬಾಬು, ನಾಗಭೂಷಣ್​, ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net