

ತುಮಕೂರು: ನಗರದ ರಸ್ತೆಗಳಲ್ಲಿ ಸಂಚರಿಸುವ ನಗರವಾಸಿಗಳ ನೆಮ್ಮದಿ ಕೆಡಿಸಿರುವ ಗುಂಡಿಗಳಿಗೆ ಮುಕ್ತಿ ಸಿಗುವ ಕಾಲ ಬಂದಿದೆ. 2000ಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತುಮಕೂರು ಮಹಾನಗರ ನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಯವರು ಒಟ್ಟಾಗಿ ಕಾರ್ಯನಿರ್ವಹಿಸಿ ನಗರದಲ್ಲಿ ಸಮರ್ಪಕ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಚರಂಡಿ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ಅನುಷ್ಟಾನಗೊಳಿಸಬೇಕು ಹಾಗೂ ನಗರದ ರಸ್ತೆಗಳನ್ನು ಸುಂದರಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದರು.