

ತುಮಕೂರು: ನಗರದಲ್ಲಿ ಮಾದಕ ವಸ್ತುಗಳು ಎಗ್ಗಿಲ್ಲದೆ ಮಾರಾಟವಾಗುತ್ತಿದೆ ಎಂಬ ಆರೋಪಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದ್ದು ನಗರವಾಸಿಗಳನ್ನು ಬೆಚ್ಚಿ ಬೀಳಿಸಿದೆ.
ನಗರದಲ್ಲಿ ಜಯನಗರದಲ್ಲಿ ಗಾಂಜಾ ಕೈತೋಟವೇ ಪತ್ತೆಯಾಗಿದ್ದು, ಖಾಲಿ ನಿವೇಷನದಲ್ಲಿ ಗಾಂಜಾ ಬೆಳೆದು ವ್ಯಸನಿಗಳು ಬಳಸುತ್ತಿರುವುದು ತಡವಾಗಿ ಪೊಲೀಸರಿಗೆ ಗೊತ್ತಾಗಿದೆ.
ನಗರದ ದೇವರಾಜ ಅರಸು ರಸ್ತೆಯ ಸರಸ್ವತಿಪುರಂನ 5ನೇ ಕ್ರಾಸ್ನಲ್ಲಿರುವ ಖಾಲಿ ನಿವೇಶನದಲ್ಲಿ ಬೆಳೆಯಲಾಗಿದ್ದ ಒಂದು ಗಾಂಜಾ ಗಿಡವನ್ನು ಜಯನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರಿಂದ ಮಾಹಿತಿ ಪಡೆದ ಪೊಲೀಸರು ಎಚ್ಚೆತ್ತುಕೊಂಡು ತಿಲಕ್ಪಾರ್ಕ್ ಸಿಪಿಐ ಪುರುಷೋತ್ತಮ ನೇತೃತ್ವದಲ್ಲಿ ಜಯನಗರ ಸಬ್ಇನ್ಸ್ಪೆಕ್ಟರ್ ಎಚ್.ಎನ್.ಮಹಾಲಕ್ಷ್ಮಮ್ಮ, ಪಿಎಸ್ಐ ಹನುಮಂತರಾಯಪ್ಪ ಮತ್ತು ಸಿಬ್ಬಂದಿ ನಿವೇಶನಕ್ಕೆ ಭೇಟಿ ನೀಡಿ ಅಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶಕ್ಕೆ ಪಡೆದಿದ್ದಾರೆ.
ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ಸೊಪ್ಪನ್ನು ಸ್ಥಳೀಯ ಹುಡುಗರು ಕಿತ್ತುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಪ್ರತಿನಿತ್ಯ ಮಕ್ಕಳು, ಯುವಕರು ಸೊಪ್ಪು ಕಿತ್ತುಕೊಂಡು ಹೋಗುವುದನ್ನು ಗಮನಿಸಿರುವ ಸ್ಥಳೀಯ ನಾಗರಿಕರು ಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು.