ದೇಶದೆಲ್ಲೆಡೆಯ ಸಮಾಜ ಕಾರ್ಯಕರ್ತರ ಸಮಾಗಮ: ಸಮಾಜಕಾರ್ಯದ ಘನತೆ ಹೆಚ್ಚಿಸಿದ ಏಕರೂಪ ನೀತಿಸಂಹಿತೆ; ಪ್ರೊ.ವೈ.ಎಸ್.ಸಿದ್ದೇಗೌಡ

MSW
Published on

ತುಮಕೂರು: ಸಮಾಜಕಾರ್ಯ ವೃತ್ತಿಯ ಸುದೀರ್ಘ 87 ವರ್ಷದ ಇತಿಹಾಸದಲ್ಲಿ, 40 ವರ್ಷಗಳ ಹಿಂದೆ ರೂಪಿಸಿದ ಅಂತಾರಾಷ್ಟ್ರೀಯ ಮಟ್ಟದ ಏಕರೂಪ ನೀತಿಸಂಹಿತೆಗೆ ಬದಲಾವಣೆ ತಂದಿದ್ದು ವೃತ್ತಿಯ ಘನತೆ ಹೆಚ್ಚಿಸಿದೆ ಎಂದು ತುಮಕೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.

ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ, ಇಂಡಿಯನ್ ಸೊಸೈಟಿ ಆಫ್ ಪ್ರೊಫೆಷನಲ್ ಸೋಶಿಯಲ್ ವರ್ಕ್ (ಐಎಎಸ್‌ ಪಿಎಸ್ ಡಬ್ಲೂ) ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ `ಸಮಾಜಕಾರ್ಯ ಶಿಕ್ಷಣ ಮತ್ತು ವೃತ್ತಿಯಲ್ಲಿ ಭಾರತೀಯ ನೀತಿಸಂಹಿತೆ ಮತ್ತು ಪ್ರಮಾಣಗಳು' ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಏಕರೂಪ ನೀತಿಸಂಹಿತೆ, ಪ್ರಮಾಣಗಳು ಭಾರತೀಯ ಸಮಾಜವನ್ನು ಪ್ರತಿಧ್ವನಿಸುವಂತಿರಲಿಲ್ಲ, ಆದರೀಗ ಐಎಎಸ್‌ ಪಿಎಸ್ ಡಬ್ಲ್ಯೂ ಭಾರತೀಯ ಸಮಾಜಕ್ಕನುಗುಣವಾಗಿ ನೀತಿಸಂಹಿತೆ ಮತ್ತು ಪ್ರಮಾಣಗಳನ್ನು ಸಿದ್ಧಪಡಿಸಿ, ಹೊರತರುತ್ತಿರುವುದು ದೇಶದ ಘನತೆ ಹೆಚ್ಚಿಸಿದೆ ಎಂದರು.

ನೈತಿಕತೆಯ ಜ್ಞಾನ ಸಂಹಿತೆಯ ಯುಗದಲ್ಲಿ, ನಾವೀನ್ಯತೆಯ ಮೂಲಕ ದಕ್ಷತೆಯ ಶ್ರೇಷ್ಠತೆಗಾಗಿ ನಮ್ಮದೇ ಆದ ವ್ಯಾಖ್ಯಾನಗಳ ಅಗತ್ಯವಿದೆ. ಸಮಾಜಕಾರ್ಯವನ್ನು ಕಲಿಸುವಾಗ ತತ್ವಗಳ ಮೌಲ್ಯಗಳ ನೀತಿಗಳನ್ನು ಅನುಸರಿಸಬೇಕು. ಸಾಮಾಜಿಕ ಚಳವಳಿಗಳು, ಸಾಮಾಜಿಕ ಚಟುವಟಿಕೆಗಳು ನೀತಿ ಸಂಹಿತೆಯನ್ನು ರೂಪಿಸಿದವು ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಸಮಾಜಕಾರ್ಯ ಎಂದರೆ ಗ್ರಾಮಗಳ ಅಭಿವೃದ್ಧಿ. ಗ್ರಾಮೀಣ ಭಾಗದ ಜನರ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಬೇಕು. ಸಮಾಜಮುಖಿ ಕಾರ್ಯಗಳೆಂದರೆ ಅಭಿವೃದ್ಧಿಗಾಗಿ ಶ್ರಮಿಸಬೇಕು. ಸಮಾಜವನ್ನು ಅಭಿವೃದ್ಧಿಯ ಪಥದಲ್ಲಿ ಕರೆದುಕೊಂಡು ಹೋಗುವ ಬಲವಾದ ಗುರಿಯಿದ್ದಲ್ಲಿ ಪ್ರಗತಿ ಸಾಧ್ಯ ಎಂದರು.

ಬೆಂಗಳೂರು ನಿಮ್ಹಾನ್ಸ್ ಮನೋವೈದ್ಯಕೀಯ ಸಾಮಾಜಿಕ ಕಾರ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಐ.ಎ.ಶರೀಫ್ ಮಾತನಾಡಿ, ಸಮಾಜಕಾರ್ಯದಲ್ಲಿ
ನೀತಿ ಸಂಹಿತೆ ಅನುಸರಿಸಬೇಕು. ಸಮಸ್ಯೆಗಳ ಮೂಲ ಹುಡುಕಿ ಪರಿಹಾರ ಕಂಡುಹಿಡಿದು, ಸಮಾಜವನ್ನು ಬಳಸಿಕೊಂಡು ಸಮಾಜದ ಬದಲಾವಣೆಗಾಗಿ ಶ್ರಮಿಸಬೇಕು ಎಂದರು.

ಐ ಎಸ್ ಪಿಎಸ್ ಡಬ್ಲ್ಯೂ ಅಧ್ಯಕ್ಷ ಪ್ರೊ.ಬಿ.ರಮೇಶ್, ಉಪಾಧ್ಯಕ್ಷ ಪ್ರೊ.ಕೆ.ಜಿ.ಪರಶುರಾಮ, ಕಾರ್ಯದರ್ಶಿ ಪ್ರೊ.ಧನಶೇಖರ ಪಾಂಡಿಯನ್ ಸೇರಿದಂತೆ ದೇಶದೆಲ್ಲೆಡೆಯಿಂದ ವೃತ್ತಪರ ಸಮಾಜ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net