

ತುರುವೇಕೆರೆ: ಮನೆ ಮುಂದಿನ ತೆಂಗಿನಕಾಯಿ ರಾಶಿಯಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ದಿರುವ ಘಟನೆ ತಾಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಲ್ಲೇಶ್ವರಸ್ವಾಮಿ ದೇವಾಲಯದ ಸಮೀಪವಿರುವ ಶಂಕರಪ್ಪ ಅವರ ಸಾಕು ನಾಯಿಯನ್ನು ಮಧ್ಯರಾತ್ರಿ ಇದನ್ನು ಹೊಂಚು ಹಾಕಿರುವ ಚಿರತೆ ನಿಧಾನವಾಗಿ ಸದ್ದುಗದ್ದಲ ಇಲ್ಲದೆ ಮೆಲ್ಲನೆ ಹೋಗಿ ನಾಯಿ ಮೇಲೆ ದಾಳಿ ಮಾಡಿ ಹೊತ್ತುಕೊಂಡು ಹೋಗಿರುವ ದೃಶ್ಯ ಜನರಲ್ಲಿ ಭಯ ಹುಟ್ಟಿಸಿದೆ.
ಗ್ರಾಮದೊಳಗೆ ಚಿರತೆ ನುಗ್ಗಿ ಮನೆ ಮುಂದೆ ಮಲಗಿದ್ದ ನಾಯಿಯನ್ನು ಹೊತ್ತುಕೊಂಡು ಹೋಗಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ರಾತ್ರಿ ಮತ್ತು ಹಗಲು ವೇಳೆ ಗ್ರಾಮದ ಹೊರ ಭಾಗದಲ್ಲಿ ಜಮೀನುಗಳು, ತೋಟಗಳಿಗೆ ಹೋಗಲು ರೈತರು ಹಿಂದೇಟು ಹಾಕುವಂತಾಗಿದೆ.