ತುಮಕೂರು ವಿವಿ ಕುಲಪತಿ ನೇಮಕಾತಿ ಕಗ್ಗಂಟು: ವಿವಿ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆ

2
Published on

ತುಮಕೂರು: ಕಾಯಂ ಕುಲಪತಿ ನೇಮಕವಾಗದೆ ಶೈಕ್ಷಣಿಕ ಚಟುವಟಿಕೆಗಳಿಗೆ ಗ್ರಹಣ ಬಡಿದಿರುವ ತುಮಕೂರು ವಿವಿಗೆ ನೂತನ ಕುಲಪತಿ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ.
ಪ್ರೊ.ವೇಣುಗೋಪಾಲ್​ ನೇತೃತ್ವದ ವಿಸಿ ಆಯ್ಕೆ ಶೋಧನಾ ಸಮಿತಿ ಸಭೆ ಮೇ ಅಂತ್ಯದಲ್ಲಿ ನಡೆದು ಒಂದೂವರೆ ತಿಂಗಳು ಕಳೆದರೂ ರಾಜ್ಯಪಾಲರಿಂದ ನೇಮಕವಾಗದಿರುವ ಬಗ್ಗೆ ಕುತೂಹಲ ಮೂಡಿಸಿದೆ.

ಸಮಿತಿ ಮೂರು ಅರ್ಹರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಸರ್ಕಾರದ ಮೂಲಕ ರಾಜ್ಯಪಾಲರಿಗೆ ಕಳುಹಿಸಿದ್ದು, ಆಯ್ಕೆಗೆ ರಾಜ್ಯಪಾಲರು ಮೀನಮೇಷ ಎಣಿಸುತ್ತಿರುವುದು ಶೈಕ್ಷಣಿಕ ವಲಯದಲ್ಲಿ ಆತಂಕ ಮೂಡಿಸಿದೆ.

ವಿವಿ ಮೂಲಗಳ ಪ್ರಕಾರ ಆಯ್ಕೆ ಶೋಧನಾ ಸಮಿತಿ ಕಳುಹಿಸಿರುವ ಅಂತಿಮ ಪಟ್ಟಿಯಲ್ಲಿ ಪ್ರೊ.ಟಿ.ಪಿ.ವಿಜಯ್​, ಪ್ರೊ.ಎಂ.ವೆಂಕಟೇಶ್ವರಲು ಹಾಗೂ ಪ್ರೊ.ಜಿ.ವೆಂಕಟೇಶ್​ಕುಮಾರ್​ ಅವರ ಹೆಸರುಗಳಿವೆ ಎನ್ನಲಾಗಿದ್ದು ರಾಜ್ಯಪಾಲರು ವಿಸಿ ನೇಮಕ ತಡಮಾಡಿರುವ ಬಗ್ಗೆ ತರಹೇವಾರಿ ಚರ್ಚೆ ಆರಂಭವಾಗಿವೆ.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ನಾರಾಯಣ ಹಾಗೂ ರಾಜ್ಯಪಾಲರ ನಡುವೆ ವಿಸಿ ಆಯ್ಕೆಯಲ್ಲಿ ಹಗ್ಗಜಗ್ಗಾಟ ನಡೆಯುತ್ತಿರುವ ಬಗ್ಗೆ ವಿವಿ ಪಡಸಾಲೆಯಲ್ಲಿ ಗುಸುಗುಸು ಕೇಳಿಬರುತ್ತಿದ್ದು, ಶ್ರೀ ಕಾಯಂ ವಿಸಿ ನೇಮಕವಾಗಲಿ ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಸಿಂಡಿಕೇಟ್​ ಸದಸ್ಯರ ವಿಶೇಷ ಆಸಕ್ತಿಯ ಫಲವಾಗಿ ಕಾಯಂ ಕುಲಪತಿ ಗೈರಿನಲ್ಲ್ಲಿಯೇ ತಿಪಟೂರು ಕ್ಯಾಂಪಸ್​ "ಕಲ್ಪಸಿರಿ'ಗೆ ಶಂಕುಸ್ಥಾಪನೆ ನಡೆದಿರುವುದು ಪ್ರಮುಖ ಬೆಳವಣಿಗೆಯಾಗಿದೆ, ಇನ್ನುಳಿದಂತೆ ವಿವಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬ ಗೋಳು ವಿದ್ಯಾರ್ಥಿ ವಲಯದಲ್ಲಿದೆ.

ವಿವಿ ರಿಜಿಸ್ಟ್ರಾರ್​ಗೆ ಹೊಸ ದುಬಾರಿ ಕಾರು!: ಕಾಯಂ ಕುಲಪತಿ ಅನುಪಸ್ಥಿತಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಶೈಕ್ಷಣಿಕ ಚಟುವಟಿಕೆ ಮೇಲಷ್ಟೇ ಪರಿಣಾಮ ಬೀರಿದೆ. ಕಾಯಂ ಕುಲಪತಿ ಅನುಪಸ್ಥಿತಿಯಲ್ಲಿಯೇ ವಿವಿಯಲ್ಲಿ ಅಧಿಕಾರಿಗಳ ಐಷಾರಾಮಿ ಜೀವನಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಬಡ ವಿದ್ಯಾರ್ಥಿಗಳು ವಿವಿಯಲ್ಲಿ ದುಬಾರಿ ಶುಲ್ಕ ಕಟ್ಟಲು ಪರದಾಡುತ್ತಿರುವ ನಡುವೆಯೇ ಕುಲಸಚಿವರಿಗೆ ದುಬಾರಿ ಬೆಲೆಯ ಕಾರು ಕೊಂಡುಕೊಂಡಿರುವುದು ವಿವಾದ ಸೃಷ್ಟಿಸಿದೆ. ಹೆಚ್ಚಿನ ಸಮಯ ಕಚೇರಿಯಲ್ಲಿಯೇ ಕುಳಿತು ಕೆಲಸ ಮಾಡುವ ಕುಲಸಚಿವರ ಸೇವೆಗೆ ಒಂದು ಕಾರು, ಚಾಲಕ ಲಭ್ಯವಿದ್ದರೂ ಮತ್ತೊಂದು ದುಬಾರಿ ಕಾರು ವಿವಿಯಲ್ಲಿನ ಅಂಧ ದರ್ಬಾರ್​ಗೆ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net