

ಎಂ.ರಾಮೇಗೌಡ ನಂದಗುಡಿ
ಹೊಸಕೋಟೆ ತಾಲೂಕು ಶಿವನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಚರಂಡಿಗಳಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಯಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕರಪನಹಳ್ಳಿ, ಮೋತಕದಹಳ್ಳಿ, ಶಿವನಾಪುರ, ಭೀಮಾಪುರ, ಬಿಸನಹಳ್ಳಿ, ಮಲಿಯಪ್ಪನಹಳ್ಳಿ, ಸಿ.ಟಿ.ಗೊಲ್ಲಹಳ್ಳಿ, ದೊಡ್ಡೇನಹಳ್ಳಿ, ಡಿ.ಶೆಟ್ಟಹಳ್ಳಿ, ಕೆ.ಸತ್ಯವಾರ, ಕೊರಡಹಳ್ಳಿಯಲ್ಲಿ ರಸ್ತೆಗಳು ಹದಗೆಟ್ಟಿದ್ದು, ರಸ್ತೆಯ ಎರಡು ಬದಿಯಲ್ಲಿರುವ ಚರಂಡಿಗಳು ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿವೆ, ರಸ್ತೆ ಮತ್ತು ಮನೆಗಳಿಗೆ ತ್ಯಾಜ್ಯ ನೀರು ನುಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಗ್ರಾಪಂಗಳಿಗೆ 15ನೇ ಹಣಕಾಸು ಯೋಜನೆ ಮತ್ತು ಕಂದಾಯ ವಸೂಲಿ (ಡಿಮ್ಯಾಂಡ್) ಶಿವನಾಪುರ ಪಂಚಾಯಿತಿಗೆ 02 ವೇರ್ ಹೌಸ್ಗಳಿಂದ ಲಕ್ಷಗಟ್ಟಲೇ ಕಂದಾಯ ಹಣ ವಸೂಲಿಯಾದರೂ ಗ್ರಾಮಗಳ ಅಭಿವೃದ್ಧಿ, ಚರಂಡಿ ಸ್ವಚ್ಛತೆ, ನೈರ್ಮಲ್ಯ, ಬೀದಿ ದೀಪ ಒದಗಿಸುವಲ್ಲಿ ಗ್ರಾಪಂ ವಿಫಲವಾಗಿದೆ.
ಇದ್ದರೂ ಇಲ್ಲದಂತಾದ ವೈದ್ಯರು : ಶಿವನಾಪುರ ಆರೋಗ್ಯ ಉಪ ಕೇಂದ್ರದಲ್ಲಿ ಆರೋಗ್ಯ ಸೇವೆ ಸಕಾಲಕ್ಕೆ ಸಿಗುತ್ತಿಲ್ಲ ಎಂಬ ಆರೋಪವೂ ಇದೆ. ವೈದ್ಯೆ ಡಾ.ಪ್ರತಿಮಾ ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸದೆ, ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ. ೋನ್ ಮಾಡಿದರೆ ಸ್ವೀಕರಿಸುವುದಿಲ್ಲ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸೊಳ್ಳೆಗಳ ಅವಾಸ ಸ್ಥಾನ : ತ್ಯಾಜ್ಯ ಹಾಗೂ ಚರಂಡಿಗಳಲ್ಲಿ ನೀರು ನಿಂತು ಕೊಳೆಯುತ್ತಿರುವುದರಿಂದ ಹಗಲಿನಲ್ಲಿ ಸೊಳ್ಳೆಗಳು ಕಚ್ಚುತ್ತಿವೆ. ಇದರಿಂದ ಡೆಂ ಬರುವ ಸಾಧ್ಯತೆಯಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕುಟುಂಬದಲ್ಲಿ ಒಬ್ಬರಾದ ಬಳಿಕ ಮತ್ತೊಬ್ಬರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಕೊರಡಹಳ್ಳಿ ಮಜರೆ ಗ್ರಾಮದಲ್ಲಿ ಎಲ್ಲಿ ನೋಡಿದರೂ ಚರಂಡಿಗಳಲ್ಲಿ ನೀರು ಹರಿಯದೇ ಸೊಳ್ಳೆಗಳ ಅವಾಸ ಸ್ಥಾನವಾಗಿವೆ.
ಗ್ರಾಮದ ಮಧ್ಯಭಾಗದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಮಳೆ ಬಂದರೆ ರಸ್ತೆಯಲ್ಲಿ ನೀರು ತುಂಬಿ ಕೆರೆಯಂತಾಗುತ್ತವೆ. ಚರಂಡಿ ವ್ಯವಸ್ಥೆಯಿಲ್ಲದೇ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದರೂ ಇದುವರೆಗೂ ಪಿಡಿಒ ರವಿಕುಮಾರ್ ಗ್ರಾಮಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸಕ್ಕೆ ಮುಂದಾಗಿಲ್ಲ. | ಕೆ.ಡಿ.ರಾಮಯ್ಯ, ಗ್ರಾಮಸ್ಥ, ಕೊರಡಹಳ್ಳಿ ಕೊರಡಹಳ್ಳಿಯಲ್ಲಿ 6 ತಿಂಗಳ ಹಿಂದೆ ಚರಂಡಿ ಸ್ವಚ್ಛತೆಗೊಳಿಸಿದ್ದು, ಪ್ರಸ್ತುತ ಸ್ವಚ್ಛತೆಗೊಳಿಸಲು ಕ್ರಿಯಾ ಯೋಜನೆ ತಯಾರಿಸಿದೆ, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು. | ನಂದಿನಿ ಚನ್ನಕೇಶವ ಗ್ರಾಪಂ ಸದಸ್ಯೆ, ಮೋತಕದಹಳ್ಳಿ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ 50 ಲಕ್ಷ ರೂ., ಕಂದಾಯ ವಸೂಲಾತಿಯಲ್ಲಿ 20 ಲಕ್ಷ ರೂ. ಗಳಿಸಿದ್ದು, 2024&25ನೇ ಸಾಲಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದಿದ್ದೇವೆ. ಕೆಲವು ಗ್ರಾಮಗಳಲ್ಲಿ ಸ್ವಚ್ಛತೆ, ಬೀದಿ ದೀಪ ನಿರ್ವಹಣೆ ಮಾಡಲಾಗಿದ್ದು, ಇನ್ನೂ ಕೆಲವು ಗ್ರಾಮಗಳಲ್ಲಿ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಬೇಕಾಗಿದೆ. | ರವಿಕುಮಾರ್, ಪಿಡಿಒ ಶಿವನಾಪುರ ಗ್ರಾಪಂ ಕೊರಡಹಳ್ಳಿಯಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿದ್ದು, ಸ್ವಲ್ಪ ಮಳೆಯಾದರೆ ಸಾಕು ಚರಂಡಿ ತುಂಬಿ ಮನೆಗೆ ನುಗ್ಗುತ್ತವೆ. | ಚಿನ್ನಕ್ಕಮ್ಮ, ಗ್ರಾಮಸ್ಥೆ, ಕೊರಡಹಳ್ಳಿ