ತುಳು ಅಧ್ಯಯನಕ್ಕೆ ನಿಟ್ಟೆ ವಿವಿ ನಿರಂತರ ಪ್ರೋತ್ಸಾಹ : ನಿಕಟಪೂರ್ವ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ

tulu
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕರಾವಳಿಯ ಹೆಮ್ಮೆಯ ಭಾಷೆಯಾಗಿರುವ ತುಳುವಿನ ಅಧ್ಯಯನಕ್ಕೆ ನಿಟ್ಟೆ ವಿಶ್ವವಿದ್ಯಾಲಯ ಸದಾ ಪ್ರೋತ್ಸಾಹ ನೀಡುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಹೇಳಿದರು.

ನಿಟ್ಟೆ ವಿಶ್ವವಿದ್ಯಾಲಯ ಮತ್ತು ಐಲೇಸಾ ಸಹಯೋಗದಲ್ಲಿ ತುಳುದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, ಅಮೃತ ಸೋಮೇಶ್ವರ ತಮ್ಮ ಗುರುಗಳಾಗಿದ್ದುಕೊಂಡು ಇಂದು ಗುರುಸ್ಮರಣೆಯಾದಂತಾಯಿತು. ತಾನು ಕಾಲೇಜು ದಿನಗಳಲ್ಲಿ ಅಮೃತರ ನಾಟಕಗಳಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು.

ಕಾರ್ಯಕ್ರಮ ಪ್ರಯುಕ್ತ ತುಳು ಅಮೃತ ನೆಂಪು ಮತ್ತು ಕೊರಗ ಹಾಡು-ರೂಪಕಗಳ ಪ್ರಸ್ತುತಿ ನಡೆಯಿತು. ಡಾ.ಚೇತನ ಸೋಮೇಶ್ವರ ಅಮೃತರ ನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭ ಬಾಬು ಕೊರಗ ಪಾಂಗಾಳ ಅವರು ಬರೆದ, ವಿ.ಮನೋಹರ್ ಸಂಗೀತ ನಿರ್ದೇಶಿಸಿದ, ಚೇತನ್ ಕುಲಾಲ್ ಹಾಡಿದ ಕೊರಗ ಭಾಷೆಯ ಹಾಡು ಕೂಜಿನ ಪಾಟ್ಟ್ ಬಿಡುಗಡೆಗೊಳಿಸಲಾಯಿತು.

ನಿಟ್ಟೆ ಕ್ಯಾಂಪಸ್ ಅಧಿಕಾರಿ ಡಾ.ಗೋಪಾಲ ಮುಗೆರಾಯ, ನಿಟ್ಟೆ ವಿಶ್ವವಿದ್ಯಾಲಯದ ಡಾ.ಸಾಯಿಗೀತಾ, ಶಶಿಕುಮಾರ್ ಶೆಟ್ಟಿ, ದಾ.ನರಸಿಂಹ ಬೈಲ್ಕೇರಿ ಹಾಗೂ ಐಲೇಸಾ ಸಂಘಟನೆಯ ಅನಂತ ರಾವ್, ಶಾಂತಾರಾಮ್ ಶೆಟ್ಟಿ ಹಾಗೂ ಗಾಯಕ ರಮೇಶ್ಚಂದ್ರ ಭಾಗವಹಿಸಿದ್ದರು.

ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ನಿರಂಜನ ಎನ್.ಚಿಪ್ಳೂಣ್ಕರ್ ಸ್ವಾಗತಿಸಿದರು. ಡಾ.ನರಸಿಂಹ ಬೈಲ್ಕೇರಿ ವಂದಿಸಿದರು. ವಿದ್ಯಾರ್ಥಿಗಳಾದ ವಿಘ್ನೇಶ್ ಮಯ್ಯ ಮತ್ತು ಚೈತ್ರಾ ಶೈಲೇಂದ್ರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net