ತುಳು ಪರ 3 ಲಕ್ಷಕ್ಕೂ ಮಿಕ್ಕಿ ಟ್ವೀಟ್: ಟ್ವಿಟರ್ ಅಭಿಯಾನಕ್ಕೆ ಭರ್ಜರಿ ಸ್ಪಂದನೆ

Tulunada Flag
Published on

ಮಂಗಳೂರು: ತುಳುವನ್ನು ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಅಧಿಕೃತ ಮಾಡಬೇಕು, ಅಧಿಕೃತ ಭಾಷಾ ಮನ್ನಣೆ ನೀಡಲು ಜನಪ್ರತಿನಿಧಿಗಳು ಟ್ವೀಟ್ ಮಾಡುವುದಷ್ಟೇ ಅಲ್ಲ, ವಿಧಾನಸಭಾ ಅಧಿವೇಶನದಲ್ಲಿ ಈ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ಭಾನುವಾರ ಇಡೀ ದಿನ ಟ್ವೀಟ್ ಅಭಿಯಾನ ನಡೆಸಲಾಯಿತು.

ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 3 ಲಕ್ಷಕ್ಕೂ ಮಿಕ್ಕಿ ಟ್ವೀಟ್‌ಗಳು ತುಳು ಹ್ಯಾಷ್‌ಟ್ಯಾಗ್‌ನೊಂದಿಗೆ ಹರಿದಾಡಿದವು. TuluOffcialnKA_KL ಎಂಬ ಹ್ಯಾಷ್‌ಟ್ಯಾಗ್ ಬಹಳ ಹೊತ್ತು ಟ್ರೆಂಡಿಂಗ್‌ನಲ್ಲಿತ್ತು. ಜೈ ತುಳುನಾಡ್, ಯುವ ತುಳುನಾಡು ಸಂಘಟನೆಯ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ, 2019ರ ಡಿಸೆಂಬರ್‌ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತುಳುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸುವುದಾಗಿ ಹೇಳಿದ್ದ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಅನೇಕ ಮಂದಿ ಟ್ವೀಟ್ ಮಾಡಿದ್ದು ಗಮನಾರ್ಹ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ.ಭರತ್ ಶೆಟ್ಟಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಇದೇ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದರು. ಆದರೆ ಇದಕ್ಕೆ ಅನೇಕರು, ಜನಪ್ರತಿನಿಧಿಗಳು ಟ್ವೀಟ್ ಮಾಡುವುದಲ್ಲ, ಬದಲಿಗೆ ತುಳುವನ್ನು ಅಧಿಕೃತ ಭಾಷೆಯಾಗಿಸುವಲ್ಲಿ ಕೆಲಸ ಮಾಡಿ ಎಂದು ಉತ್ತರಿಸಿದ್ದಾರೆ.

ಜೊತೆಯಲ್ಲಿ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ತುಳುನಾಡು ಪ್ರದೇಶಕ್ಕೆ ರಾಜ್ಯದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ, ಇದೇ ಪಾಡು ತುಳು ಭಾಷೆಗೂ ಆಗಕೂಡದು ಎಂಬ ಬೇಡಿಕೆಗಳು ಅಭಿಯಾನದಲ್ಲಿ ಕೇಳಿಬಂದವು.

ಸ್ಪಂದಿಸಿದ ನಟ ಶಿವಣ್ಣ: ಚಿತ್ರನಟ ಶಿವರಾಜ್ ಕುಮಾರ್ ಕೂಡ ಬೆಂಬಲ ವ್ಯಕ್ತಪಡಿಸಿ, ತುಳುವಿಗೆ ಅಧಿಕೃತ ಭಾಷಾ ಮಾನ್ಯತೆ ಅಭಿಯಾನಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.

ವರ್ಲ್ಡ್ ಟ್ರೆಂಡಿಂಗ್‌ನಲ್ಲಿ 6ನೇ ಸ್ಥಾನ: ಮಧ್ಯಾಹ್ನದ ವೇಳೆಗೆ ವರ್ಲ್ಡ್ ಟ್ರೆಂಡಿಂಗ್‌ನಲ್ಲಿ 6ನೇ ಸ್ಥಾನಕ್ಕೇರುವ ಮೂಲಕ ಜಗತ್ತಿನ ಗಮನ ಸೆಳೆದಿತ್ತು. ಸಂಜೆ ಗಂಟೆ ವೇಳೆಗೆ 1.77 ಲಕ್ಷ ಮಂದಿ ಟ್ವೀಟ್ ಮಾಡಿದ್ದರೆ ರಾತ್ರಿಗೆ ಇದು 3 ಲಕ್ಷಕ್ಕೂ ಮಿಕ್ಕಿ ದಾಟಿದೆ. ಭಾನುವಾರ ರಾತ್ರಿ 12ರವರೆಗೂ ಟ್ವಿಟ್ಟರ್ ಅಭಿಯಾನ ಮುಂದುವರಿದಿತ್ತು. ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನದ ಬೇಡಿಕೆ ಮುಂದಿಟ್ಟು ಟ್ವೀಟ್ ಅಭಿಯಾನ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net