

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ‘ವಿಜಯವಾಣಿ’ಯ ಹಿರಿಯ ಉಪ ಸಂಪಾದಕ ರಾಜೇಶ್ ಶೆಟ್ಟಿ ದೋಟ ಅವರ ‘ಮುಗದಾರಗೆ’ ತುಳು ಕವನ ಸಂಕಲನ ಆಯ್ಕೆಯಾಗಿದೆ.
2023ನೇ ಸಾಲಿನಲ್ಲಿ ತುಳು ಕವನ ವಿಭಾಗದಲ್ಲಿ ರಘು ಇಡ್ಕಿದು ಅವರ ‘ಎನ್ನ ನಲಿಕೆ’, ತುಳು ಕಾದಂಬರಿ ವಿಭಾಗದಲ್ಲಿ ರಾಜಶ್ರೀ ಟಿ.ರೈ ಪೆರ್ಲ ಅವರ ‘ಮುಸ್ರಾಲೊ ಪಟ್ಟೊ’, ತುಳು ಅನುವಾದ ವಿಭಾಗದಲ್ಲಿ ಕುಶಾಲಾಕ್ಷಿ ವಿ.ಕುಲಾಲ್ ಅವರ ‘ತಗೊರಿ ಮಿತ್ತ್‌ದ ಮಣ್ಣ್’ ಕೃತಿ ಆಯ್ಕೆಯಾಗಿದೆ. ಪುಸ್ತಕ ಪ್ರಶಸ್ತಿ 25 ಸಾವಿರ ರೂ., ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ.
ದತ್ತಿನಿಧಿ ಪ್ರಶಸ್ತಿ
ಅಕಾಡೆಮಿಯ ಉಷಾ ಪಿ.ರೈ ದತ್ತಿನಿಧಿ ಪ್ರಶಸ್ತಿಗೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ‘ತುಳು ಕಾವ್ಯ ಮೀಮಾಂಸೆ’(2022), ಡಾ.ಚಿನ್ನಪ್ಪ ಗೌಡ ಅವರ ‘ಕರಾವಳಿ ಕಥನ’(2023), ದಿ.ಕೆ.ಅಮರನಾಥ ಶೆಟ್ಟಿ ದತ್ತಿನಿಧಿ ಪ್ರಶಸ್ತಿಗೆ ಯಶೋದಾ ಮೋಹನ್ ಅವರ ‘ದೇರ ಮಾಮುನ ದೂರ ನೋಟೊಲು’(2022), ಡಾ.ವಿ.ಕೆ.ಯಾದವ್ ಅವರ ‘ಮೊಗವೀರೆರ‌್ನ ಸಾಂಸ್ಕೃತಿಕ ಬದ್‌ಕ್ ಬೊಕ್ಕ ಆರ್ಥಿಕ ಚಿಂತನೆ’(2023), ದಿ.ಶಿವಾನಂದ ಕರ್ಕೇರ ದತ್ತಿನಿಧಿ ಪ್ರಶಸ್ತಿಗೆ ಶಾರದಾ ಅಂಚನ್ ಅವರ ‘ನಂಬಿ ಸತ್ಯೊಲು’(2022), ರಘುನಾಥ ವರ್ಕಾಡಿ ಅವರ ‘ಸೂರ್ಯ ಚಂದ್ರ ಸಿರಿ’(2023) ಆಯ್ಕೆಯಾಗಿದೆ. ದತ್ತಿನಿಧಿ ಪ್ರಶಸ್ತಿ 10 ಸಾವಿರ ರೂ., ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾ.15ರಂದು ಬೆಳಗ್ಗೆ 10ಕ್ಕೆ ಮಂಗಳೂರಿನ ಉರ್ವಸ್ಟೋರ್‌ನ ತುಳುಭವನ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.