ತುಳು ರಂಗಭೂಮಿಗೆ ಲಾಕ್‌ಡೌನ್ ಹೊಡೆತ

nataka new
Published on

-ಪಿ.ಬಿ.ಹರೀಶ್ ರೈ ಮಂಗಳೂರು

ನಿಗದಿಯಾಗಿದ್ದ ಸಾವಿರಕ್ಕೂ ಅಧಿಕ ನಾಟಕ ಪ್ರದರ್ಶನ ರದ್ದು. ಬಿಡುಗಡೆಯಾಗದ ಐದಾರು ಸಿನಿಮಾ. ಶೂಟಿಂಗ್ ನಿಲ್ಲಿಸಿದ ಹತ್ತಾರು ಸಿನಿಮಾಗಳು. ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ನೂರಾರು ಕಲಾವಿದರಿಗೆ, ಬಂಡವಾಳ ಹೂಡಿದ ನಿರ್ಮಾಪಕರಿಗೆ ಆತಂಕದ ದಿನಗಳು.. ಇದು ತುಳು ರಂಗಭೂಮಿ ಮತ್ತು ಕೋಸ್ಟಲ್‌ವುಡ್‌ಗೆ ಕರೊನಾ ಲಾಕ್‌ಡೌನ್‌ನಿಂದ ಒದಗಿದ ದುಃಸ್ಥಿತಿ.

ತುಳು ನಾಟಕ ತಂಡಗಳಿಗೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸುಗ್ಗಿ. ವಾರದಲ್ಲಿ ಕನಿಷ್ಠ 4-5 ಪ್ರದರ್ಶನ ಇರುತ್ತದೆ. ಮುಂಬೈ ಹಾಗೂ ಇತರ ರಾಜ್ಯದಲ್ಲಿರುವ ತುಳುವರು ರಜಾ ದಿನಗಳಲ್ಲಿ ಊರಿಗೆ ಬರುವ ಕಾರಣ ಇದೇ ಅವಧಿಯಲ್ಲಿ ಸಾಲುಸಾಲು ತುಳು ಸಿನಿಮಾಗಳು ಕೂಡ ಬಿಡುಗಡೆಗೊಳ್ಳುತ್ತವೆ. ಆದರೆ ಈಗ ತುಳು ರಂಗಭೂಮಿ ಮತ್ತು ಕೋಸ್ಟಲ್‌ವುಡ್‌ಗೆ ಕರೊನಾ ಕರಿಛಾಯೆ ಆವರಿಸಿದೆ.

ನಾಟಕ ಪ್ರದರ್ಶನ ರದ್ದು

ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ 15ಕ್ಕೂ ಅಧಿಕ ತುಳು ನಾಟಕ ತಂಡಗಳಿವೆ. ಸೀಸನ್‌ನ ಮೂರು ತಿಂಗಳು ಬ್ರಹ್ಮಕಲಶೋತ್ಸವ, ವಾರ್ಷಿಕೋತ್ಸವ ಹೀಗೆ ವಿವಿಧ ಸಮಾರಂಭಗಳಿಗಾಗಿ ಬಹುತೇಕ ಎಲ್ಲ ನಾಟಕ ತಂಡಗಳ ಪ್ರದರ್ಶನ ಬುಕ್ ಆಗಿತ್ತು. ಈಗ ಎಲ್ಲ ಪ್ರದರ್ಶನ ರದ್ದುಗೊಂಡಿದೆ. ತುಳು ರಂಗಭೂಮಿಗೆ ಸುಮಾರು 4.5 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಲಾವಿದರ ಪೈಕಿ ಕೆಲವರು ಮಾತ್ರ ಉದ್ಯೋಗಸ್ಥರು. ಉಳಿದವರಿಗೆ ನಾಟಕದಿಂದಲೇ ಬದುಕು. ಅದರಲ್ಲೂ ಮಹಿಳಾ ಕಲಾವಿದರಿಗೆ ರಂಗಭೂಮಿಯೇ ಆಧಾರ. ಪ್ರದರ್ಶನ ಮುಗಿಯುತ್ತಿದ್ದಂತೆ ಸಂಭಾವನೆ ಕೈಸೇರುವ ಕಾರಣ ಕಲಾವಿದರ ಬದುಕಿಗೆ ಕೊಂಚ ಭದ್ರತೆ ಇತ್ತು. ಈಗ ಪ್ರದರ್ಶನವಿಲ್ಲದೆ ಕಂಗಾಲು.

ಚಿತ್ರ ಬಿಡುಗಡೆಯಾಗದೆ ಬಾಕಿ ಇಂಗ್ಲೀಷ್, ಕಲ್ಲುರ್ಟಿ ಕಲ್ಕುಡೆ, ಪೆಪ್ಪೆರೆರೆ ಪೆರೆರೆರೆ, ಏರೆಗಾವುಯೆ ಕಿರಿಕಿರಿ ಸಹಿತ 6ಕ್ಕೂ ಅಧಿಕ ತುಳು ಸಿನಿಮಾಗಳು ಬಿಡುಗಡೆಯ ಸಾಲಿನಲ್ಲಿದ್ದವು. ಭೋಜರಾಜ ಎಂಬಿಬಿಎಸ್, ಪಿರ್ಕಿಲು ಬತ್ತೆರಾ, ರಾಕೆಟ್, ಗಬ್ಬರ್ ಸಿಂಗ್ ಮುಂತಾದ ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದವು. 3-4 ಸಿನಿಮಾಗಳು ಡಬ್ಬಿಂಗ್ ಹಂತದಲ್ಲಿದ್ದವು. ತುಳು ಚಿತ್ರ ನಿರ್ಮಾಪಕರು ಸುಮಾರು 9 ಕೋಟಿ ರೂ. ಬಂಡವಾಳ ಹೂಡಿದ್ದು, ಸಕಾಲದಲ್ಲಿ ಸಿನಿಮಾ ಬಿಡುಗಡೆಯಾಗದೆ ಸಂಕಷ್ಟದಲ್ಲಿದ್ದಾರೆ. ಲಾಕ್‌ಡೌನ್ ಅವಧಿ ಮುಗಿದ ಬಳಿಕವೂ ಜನ ಥಿಯೇಟರ್‌ಗಳಿಗೆ ಬರಲು ಹಿಂದೇಟು ಹಾಕಬಹುದು ಎನ್ನುವ ಆತಂಕ ಸಿನಿಮಾ ವಲಯದಲ್ಲಿದೆ.

ಲಾಕ್‌ಡೌನ್‌ನಿಂದ ನಾಟಕ ತಂಡಗಳು ನಷ್ಟ ಅನುಭವಿಸುವುದು ಅನಿವಾರ್ಯ. ಮಾರ್ಚ್, ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಎಲ್ಲ ನಾಟಕಗಳು ರದ್ದುಗೊಂಡಿವೆ. ಅದೇ ಸಂಘ ಸಂಸ್ಥೆಯವರು ಇನ್ನು ಪ್ರದರ್ಶನ ಏರ್ಪಡಿಸಲು ಸಾಧ್ಯವಿಲ್ಲ. ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ವೈಯಕ್ತಿಕವಾಗಿ ಕೆಲವರಿಗೆ ನೆರವು ನೀಡಿದ್ದೇನೆ. ತುಳು ಸಿನಿಮಾ ರಂಗವೂ ಈಗ ಆತಂಕದಲ್ಲಿದೆ. -ದೇವದಾಸ್ ಕಾಪಿಕಾಡ್ ನಟ, ನಿರ್ದೇಶಕ ನಮ್ಮ ತಂಡದ ‘ಶಿವದೂತೆ ಗುಳಿಗೆ’ ನಾಟಕ ಅತ್ಯಂತ ಕಡಿಮೆ ಅವಧಿಯಲ್ಲಿ ನೂರು ಪ್ರದರ್ಶನದ ದಾಖಲೆ ಮಾಡುವ ಹಂತದಲ್ಲಿತ್ತು. ಆದರೆ ಲಾಕ್‌ಡೌನ್ ಇದಕ್ಕೆ ಅಡ್ಡಿಯಾಯಿತು. ನಾಟಕ ಪ್ರದರ್ಶನ ನಡೆಸಲು ಉದ್ದೇಶಿಸಿದ್ದ ಕೆಲವು ಸಂಸ್ಥೆಯವರು 2021ರ ಜನವರಿ, ಫೆಬ್ರವರಿ ತಿಂಗಳಿಗೆ ಮುಂದೂಡಿದ್ದಾರೆ. ತುಳು ಸಿನಿಮಾ ರಂಗ ಚೇತರಿಸಿಕೊಳ್ಳಲು ತುಂಬ ಸಮಯ ಬೇಕಾಗಬಹುದು. -ವಿಜಯಕುಮಾರ್ ಕೊಡಿಯಾಲ್‌ಬೈಲ್ ಚಿತ್ರ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net