

ಮಂಗಳೂರು: ತುಳುವಿನಲ್ಲಿ ಪ್ರಕಟಿತ ಮೊದಲ ಪಿಎಚ್.ಡಿ ಅಧ್ಯಯನ ಗ್ರಂಥ ಮೊಗವೀರರ ಸಾಂಸ್ಕೃತಿಕ ಬದ್‌ಕ್ ಬೊಕ್ಕ ಆರ್ಥಿಕ ಚಿಂತನೆ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಾಹಿತಿ ಚಂದ್ರಹಾಸ ಕಣಂತೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವು ಕಾರಣಗಳಿಂದ ತುಳು ಭಾಷೆಗೆ ಅಧಿಕೃತ ಸಾಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ ಎಂಬ ಕೊರಗು ಕಾಡುತ್ತಿರುವುದು ಸಹಜ. ಈ ಹೋರಾಟದ ಹಾದಿಯಲ್ಲಿ ತುಳುವಿನಲ್ಲಿ ಅಧ್ಯಯನ ಗ್ರಂಥಗಳ ಕೊರತೆಯನ್ನು ತಾರ್ಕಿಕವಾಗಿ ಬೊಟ್ಟು ಮಾಡಿ ತೋರಿಸಲಾಗುತ್ತಿದ್ದು, ತುಳು ಭಾಷೆಯಲ್ಲೇ ಪಿಎಚ್.ಡಿ ಅಧ್ಯಯನ ಮಾಡಿ ಪ್ರಾಧ್ಯಾಪಕ ಡಾ.ವಿ.ಕೆ.ಯಾದವ್ ಸಸಿಹಿತ್ಲು ಮೊಗವೀರರ ಸಾಂಸ್ಕೃತಿಕ ಬದ್‌ಕ್ ಬೊಕ್ಕ ಆರ್ಥಿಕ ಚಿಂತನೆ ಎಂಬ ಮಹಾಪ್ರಬಂಧವನ್ನು ಗ್ರಂಥರೂಪದಲ್ಲಿ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಿರುವುದು ತುಳು ಭಾಷೆ, ಸಾಹಿತ್ಯದ ಮಟ್ಟಿಗೆ ಉತ್ತಮ ಕಾರ್ಯ ಎಂದು ಹೇಳಿದರು.
ಮೂಲ್ಕಿ ಅರಮನೆಯ ಅರಸ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಗ್ರಂಥ ಲೋಕಾರ್ಪಣೆ ಮಾಡುವರು. ನಾಡೋಜ ಡಾ.ಜಿ. ಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾಲಿಂಗ ಭಟ್ ಕೆ. ಪರಿಚಯಿಸಲಿದ್ದಾರೆ. ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಶುಭ ಹಾರೈಸಲಿದ್ದು ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಯಶಪಾಲ್ ಸುವರ್ಣ ಪಾಲ್ಗೊಳ್ಳಲಿದ್ದಾರೆ ಎಂದರು.
ಡಾ.ವಿ.ಕೆ.ಯಾದವ ಸಸಿಹಿತ್ಲು, ತುಳು ಅಕಾಡೆಮಿ ಮಾಜಿ ಸದಸ್ಯ ಬೆನೆಟ್ ಅಮ್ಮಣ್ಣ, ಸಾಹಿತಿ ರಾಮ್‌ದಾಸ್ ಪಾವಂಜೆ ಸುದ್ದಿಗೋಷ್ಠಿಯಲ್ಲಿದ್ದರು.