

ಕಾರ್ಕಳ: ತುಳುವಿನ ಮೂಲವನ್ನು ಪ್ರಾಚೀನ ಕಾಲದಿಂದಲೂ ಗುರುತಿಸಬಹುದು. 2000 ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ತುಳು ಭಾಷೆ ಹೊಂದಿದ್ದು, ತುಳು ಲಿಪಿಯಲ್ಲಿ ಬರೆಯಲಾದ ಮಹಾಕಾವ್ಯ ಮಹಾ ಭಾರತದ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ತುಳುವಿನ ಉಲ್ಲೇಖವಿದೆ. ಅತ್ಯಂತ ಪುರಾತನ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ಇಲ್ಲಿನ ಕಲೆ ಸಾಹಿತ್ಯ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಬಿ.ಜನಾರ್ದನ ಭಟ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ನಂದಳಿಕೆ ಅಬ್ಬನಡ್ಕ ಶ್ರೀ ದುಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಜಂಟಿ ಆಶ್ರಯದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ರಜತ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ನಡೆದ ತುಳು ಪರ್ಬ ಹಾಗೂ ತುಳು ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಪಾಂಗಾಳ ಬಾಬು ಕೊರಗ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುವರು ತುಳು ಭಾಷೆಯ ಆರಾಧನೆಯನ್ನು ನಡೆಸುತ್ತಿರುವುದು ಅಭಿವಾನದ ವಿಷಯವಾಗಿದೆ. ನಮ್ಮ ನಾಡಿನ ಆಚಾರ, ವಿಚಾರವನ್ನು ತುಳು ಪರ್ಬದ ಮೂಲಕ ಆಚರಿಸುತ್ತಿರುವುದು ಪ್ರಶಂಸನೀಯ ಎಂದರು.
ತುಳು ಕವಿಗೋಷ್ಠಿಯಲ್ಲಿ ಜಿಲ್ಲೆಯ ಕವಿಗಳಾದ ವಾಸಂತಿ ಅಂಬಲಪಾಡಿ, ಹರಿಪ್ರಸಾದ್ ನಂದಳಿಕೆ, ದೀಪಿಕಾ ಉಡುಪಿ, ಸುಲೋಚನಾ ಪಚ್ಚಿನಡ್ಕ, ಶ್ರೀ ಮುದ್ರಾಡಿ ತುಳು ಕವನ ವಾಚಿಸಿದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ದಿನೇಶ್ ಪೂಜಾರಿ, ಪುಷ್ಪಾ ಕುಲಾಲ್, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕಾಸರಬೈಲು ಉಪಸ್ಥಿತಿತರಿದ್ದರು.
ಪದ್ಮಶ್ರೀ ಪೂಜಾರಿ ಮತ್ತು ಅನ್ನಪೂರ್ಣಾ ಕಾಮತ್ ಪ್ರಾರ್ಥಿಸಿದರು. ಕಾರ್ಯದರ್ಶಿ ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ಮಹಿಳಾ ಸಂಟನಾ ಕಾರ್ಯದರ್ಶಿ ಲೀಲಾ ಪೂಜಾರಿ ವಂದಿಸಿದರು. ಸಂಚಾಲಕ ಅಬ್ಬನಡ್ಕ ಸಂದೀಪ್ ವಿ.ಪೂಜಾರಿ ನಿರೂಪಿಸಿದರು.