ದೈವಾರಾಧನೆಯಿಂದ ಹುಟ್ಟಿದ ಭಾಷೆ ತುಳು

MDG tulu
ತುಳು ವೈಭವೊ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಹಸೈನಾರ್, ಜೀಟಾ ವಿ.ಲೋಬೋ, ರಶ್ಮಿ, ಸುಜಿತ್ ಅವರನ್ನು ಸನ್ಮಾನಿಸಲಾಯಿತು. ಡಾ. ರವೀಶ್ ಪಡುಮಲೆ, ಟಿ.ಇಸ್ಮಾಯಿಲ್, ಸ್ವಾಮಿ ಮಾರ್ಷಲ್ ಪಿಂಟೋ, ವಿನೋದ್ ಶೆಟ್ಟಿ, ಪಿ.ಕೆ.ಹಮೀದ್, ವಿಶ್ವಕುಮಾರ್, ಡಾ. ರಾಮಚರಣ ಅಡ್ಯಂತಾಯ ಇತರರಿದ್ದರು.
Published on

ಮೂಡಿಗೆರೆ: ಕರಾವಳಿ ತುಳು ಭಾಷೆ ದೈವಾರಾಧನೆಯಿಂದ ಹುಟ್ಟಿತು. ಕಾಲ ಕಳೆದಂತೆ ದೇಶಾದ್ಯಂತ ವಿಸ್ತರಿಸಿ ಈಗ ವಿದೇಶದಲ್ಲೂ ಮನ್ನಣೆ ಪಡೆದಿದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ದೈವ ನರ್ತಕ ಡಾ. ರವೀಶ್ ಪಡುಮಲೆ ಅಭಿಪ್ರಾಯಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳುಕೂಟದಿಂದ ಶುಕ್ರವಾರ ಆಯೋಜಿಸಿದ್ದ 15ನೇ ವರ್ಷದ ತುಳು ವೈಭವೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಂಜುರ್ಲಿ, ಈಶ್ವರ, ಪಿಲಿಚಾಂಡಿ, ಕಲ್ಲುರ್ಟಿ, ನಾಗ ತುಳು ಭಾಷೆ ಸೃಷ್ಟಿಸಿದ ದೈವಗಳು. ಈ ದೈವಗಳು ಮಾತನಾಡುತ್ತಿದ್ದ ಭಾಷೆ ತುಳು. ಈಗಲೂ ದೇಶ, ವಿದೇಶಗಳಲ್ಲೂ ತುಳು ನಾಡಿನ ಭವ್ಯ ಪರಂಪರೆ ಎತ್ತಿ ಹಿಡಿದಿದೆ ಎಂದರು.
ತುಳುನಾಡಿನ ಪ್ರಖ್ಯಾತ ದೈವಾರಾಧನೆ, ಭೂತದ ಕೋಲ, ಕೋರಿ ಕಟ್ಟ, ಕಂಬಳ ಮುಂತಾದ ಸ್ಥಳದಲ್ಲಿ ತುಳು ಹೊರತು ಬೇರೆ ಭಾಷೆಗಳ ಪ್ರವೇಶ ತೀರ ಕಡಿಮೆಯಿದೆ. ತುಳುವಿಗೆ ತನ್ನದೇ ಆದ ಸಿದ್ಧಾಂತ, ಪಾಂಡಿತ್ಯ, ಸಂಸ್ಕೃತಿಯಿದೆ. ಈಶ್ವರ ದೈವ ತುಳು ಸಂಸ್ಕೃತಿಗೆ ಅಡಿಗಲ್ಲು ಹಾಕಿದೆ. ಶತಮಾನಗಳ ಹಿಂದೆ ಕರಾವಳಿಯ ಮನೆಗಳ ವಿನ್ಯಾಸವನ್ನು ಈಶ್ವರದೈವ ಹಾಕಿಕೊಟ್ಟಿದೆ. ಮನೆಯ ಎಡಬದಿ ಜಾನುವಾರು ಕೊಟ್ಟಿಗೆ, ಮುಂಭಾಗದಲ್ಲಿ ಬಾವಿ ಮತ್ತು ತುಳಸಿ ಕಟ್ಟೆ, ಹಿಂಭಾಗದಲ್ಲಿ ತೋಟ, ಮನೆಯ ಎದುರು ಹೂವಿನ ಗಿಡಗಳ ಕೈತೋಟ ಹೀಗೆ ಮನೆಯಂಗಳವನ್ನು ಈಶ್ವರದೈವ ವಿನ್ಯಾಸಗೊಳಿಸಿದೆ. ಆ ಪದ್ಧತಿ ಈಗಲೂ ಮುಂದುವರಿದಿದೆ. ತುಳುನಾಡಿನ ಪರಂಪರೆ ಅಗಾಧವಾಗಿ ಬೆಳೆಯಲು ಸ್ವಾಮಿ ಕೊರಗಜ್ಜ, ನಾಗನಬನ ಮತ್ತು ಈಶ್ವರದೈವ ಮುನ್ನುಡಿ ಬರೆದಿರುವ ಬಗ್ಗೆ ತುಳು ಚರಿತ್ರೆಯಿದೆ. ಇಂಥ ಸಮೃದ್ಧಿಯಿಂದ ಕೂಡಿದ ಭವ್ಯ ಭಾಷೆಗೆ ಶ್ರೀಮಂತಿಕೆಯ ಶಕ್ತಿಯಿದೆ ಎಂದು ವಿಶ್ಲೇಷಿಸಿದರು.
ದಶಕದ ಹಿಂದೆ ಕರಾವಳಿಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಒಂದೇ ತಾಯಿಯ ಮಕ್ಕಳಂತೆ ಸಹಬಾಳ್ವೆ ನಡೆಸುತ್ತಿದ್ದರು. ಶಾಂತಿ, ಪ್ರೀತಿ, ಸೌಹಾರ್ದ, ಸಹಬಾಳ್ವೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ಒಟ್ಟಿಗೆ ಸೇರಿಕೊಂಡು ವಿವಿಧ ಧರ್ಮಗಳ ಹಬ್ಬ ಆಚರಿಸಿ ಸಂಭ್ರಮ ಪಡುತ್ತಿದ್ದರು. ಈಗ ಸೌಹಾರ್ದ ಕಾಣಸಿಗುತ್ತಿಲ್ಲ. ಎಲ್ಲೆಡೆ ವೈಮನಸ್ಸು, ಧರ್ಮಗಳೊಳಗೆ ಕಲಹ ಮಿತಿಮೀರಿದೆ. ತುಳು ಭಾಷೆಯನ್ನು ವಿವಿಧ ಧರ್ಮೀಯರು ಗುಂಪುಗೂಡಿ ಮಾತನಾಡಿದಾಗ ಸೌಹಾರ್ದ ಮತ್ತೊಮ್ಮೆ ಚಿಗುರುತ್ತದೆ ಎಂಬ ಭಾವನೆ ಸರ್ವಧರ್ಮೀಯರಲ್ಲೂ ಇದೆ. ಭಾಷೆಯಿಂದ ಸಹಬಾಳ್ವೆ ಜೀವನ ನಡೆಸಲು ಸಾಧ್ಯವಿದ್ದರೂ ಈಗಿನ ಕಾಲದಲ್ಲಿ ಅದು ಸುದೀರ್ಘಕಾಲ ಮುಂದುವರಿಯಲು ಸಾಧ್ಯವಿಲ್ಲದಂತಾಗಿದೆ ಎಂದು ಚಿಕ್ಕಮಗಳೂರಿನ ಕ್ರೈಸ್ತ ಧರ್ಮಗುರು ಸ್ವಾಮಿ ಮಾರ್ಷಲ್ ಪಿಂಟೋ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಸಮಾಜ ಸೇವಕ ಹಸೈನಾರ್, ಶಿಕ್ಷಕಿ ಝೀಟಾ ವಿ. ಲೋಬೋ, ಕ್ರೀಡಾಪಟುಗಳಾದ ರಶ್ಮಿ, ಸುಜಿತ್ ಅವರನ್ನು ಸನ್ಮಾನಿಸಲಾಯಿತು.
ತುಳುಕೂಟದ ಅಧ್ಯಕ್ಷ ವಿನೋದ್, ಉಳ್ಳಾಲದ ಸೈಯದ್ ಮದನಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಟಿ.ಇಸ್ಮಾಯಿಲ್, ತುಳುಕೂಟದ ಪ್ರಮುಖರಾದ ಡಾ. ರಾಮಚರಣ ಅಡ್ಯಂತಾಯ, ಜಾನ್ ಡಿಸೋಜಾ, ಡಾ. ಜೀವನ್ ಕಳಮೆ, ವಿಶ್ವಕುಮಾರ್, ಪಿ.ಕೆ.ಹಮೀದ್, ದಾಕ್ಷಾಯಿಣಿ, ವಸಂತ ಹಾರ್ಗೋಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net