ತುಳು-ಕನ್ನಡ ರಾಜ್ಯದ ಎರಡು ಕಣ್ಣುಗಳು

Rajyotsava Udupi
Published on

ಉಡುಪಿ : ತುಳು ಕನ್ನಡ ಎರಡು ಕಣ್ಣುಗಳಿದ್ದಂತೆ ಎರಡು ಭಾಷೆಗಳನ್ನು ಒಟ್ಟಾಗಿ ಬೆಳೆಸುವುದು ಕರಾವಳಿಗರ ಆದ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಉಡುಪಿ ಪ್ರಾಚೀನಕಾಲದಿಂದಲೂ ಕನ್ನಡನಾಡಿನ ಭಾಗವಾಗಿ ಗುರುತಿಸಿಕೊಂಡಿದೆ ತುಳು ಇಲ್ಲಿನ ಪ್ರಚಲಿತ ಭಾಷೆಯಾಗಿದ್ದರೂ ಆಡಳಿತ ಮತ್ತು ಶಿಕ್ಷಣ ಭಾಷೆಯಾಗಿ ಕನ್ನಡವನ್ನು ಬಳಸಲಾಗುತ್ತದೆ. ಅಸಂಖ್ಯಾತ ಜನರ ತ್ಯಾಗ ಮತ್ತು ಬಲಿದಾನದ ಕನ್ನಡ ನಾಡು ನುಡಿ ಸಾಂಸ್ಕೃತಿಕ ಉಳಿವು ಸಾಧ್ಯವಾಗಿದೆ. ಕನ್ನಡ ಸಾಹಿತಿಗಳಿಗೆ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯದ ಏಕೀಕರಣ ಸಂದರ್ಭದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಚದುರಿಹೋಗಿದ್ದ ಕನ್ನಡಿಗರು ಐಕ್ಯತೆಯನ್ನು ಪ್ರದರ್ಶಿಸಿದ್ದು, ಸಾಂಕ್ರಮಿಕ ರೋಗದ ವಿರುದ್ಧ ಹೋರಾಟದಲ್ಲಿ ಸಹಮತದಿಂದ ಕಾರ್ಯನಿರ್ವಹಿಸುವುದು ಅತಿ ಅಗತ್ಯ ಎಂದರು.

ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾದ ಸ್ಪೂರ್ತಿ ಅಶೋಕ್ ರಾಥೋಡ್ ಮತ್ತು ರಶ್ಮಿತಾ ಎನ್. ಅವರಿಗೆ ತಲಾ 1 ಲಕ್ಷ ರೂ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. 36  ಸಾಧಕರು ಹಾಗೂ ನಾಲ್ಕು ಸಂಘ-ಸಂಸ್ಥೆಗಳಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕ ರಘುಪತಿ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ ಭಟ್, ಜಿಲ್ಲಾಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ ಹೆಗ್ಡೆ , ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಗರಸಭಾಧ್ಯಕ್ಷೆ ಸುಮಿತ್ರ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಆಯುಕ್ತ ರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net