

ಉಡುಪಿ: ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಬೇಕಾದರೆ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ ಪಡೆಯಬೇಕು. ಹೀಗಾಗಿ ಮುಂದಿನ ಜನಗಣತಿ ಸಂದರ್ಭ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡಿನ ಎಲ್ಲ ಜಾತಿ, ಧರ್ಮದ ನಾಗರಿಕರು ಮಾತೃಭಾಷೆ ‘ತುಳು’ ಎಂದು ನಮೂದಿಸುವಂತೆ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು. ತುಳು ಸಾಹಿತ್ಯ ಅಕಾಡೆಮಿ, ಎಂಜಿಎಂ ತುಳು ಸಂಘ, ತುಳುಕೂಟ ಉಡುಪಿ ಆಶ್ರಯದಲ್ಲಿ ಮುದ್ದಣ ಮಂಟಪದಲ್ಲಿ ಶುಕ್ರವಾರ ತುಳು ಐಸಿರಿ 2020 ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ಆರಾಧನೆ ತುಳು ಸಂಸ್ಕೃತಿಯ ವೈಶಿಷ್ಟೃವಾಗಿದ್ದು, ಇದನ್ನು ಮೀರಿ ನಡೆದರೆ ಆಪತ್ತು ಎದುರಾಗಲಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ 2,500 ವರ್ಷಗಳ ಇತಿಹಾಸವಿದೆ. ತುಳು ಸ್ವತಂತ್ರ ಭಾಷೆಯಾಗಿದ್ದು, ಸ್ವಂತ ಲಿಪಿ ಹೊಂದಿರುವುದು ವಿಶೇಷ. ಕರಾವಳಿಯಲ್ಲಿ ಸಂಸ್ಕೃತಕ್ಕೂ ಲಿಪಿ ಕೊಟ್ಟ ಭಾಷೆ ತುಳು ಎಂಬುದು ಹೆಮ್ಮೆಯ ವಿಚಾರ. ತುಳು ಲಿಪಿ ಬಳ್ಳಿಯೋಪಾದಿಯಲ್ಲಿ ಬರೆಯಲು ಸಾಧ್ಯವಾಗುತ್ತದೆ. ಇದರಿಂದ ತಾಡವಾಲೆ ಹರಿಯುವುದಿಲ್ಲ. ಹೀಗಾಗಿ ಶತಮಾನಗಳ ಹಿಂದಿನ ಸಂಸ್ಕೃತ ಗ್ರಂಥಗಳನ್ನು ತುಳು ಲಿಪಿಯಲ್ಲಿ ಬರೆಯಲಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯ ಚೇತನ್ ಪೂಜಾರಿ, ಕಂಬಳ ಓಟಗಾರ ಶ್ರೀನಿವಾಸ ಗೌಡ, ತುಳು ಚಿತ್ರನಟ ಮಂಜು ರೈ, ನಟ ಮರ್ವಿನ್ ಶಿರ್ವ, ತುಳುಕೂಟದ ಇಂದ್ರಾಳಿ ಜಯಕರ ಶೆಟ್ಟಿ, ಜೇಸಿ ಅಧ್ಯಕ್ಷೆ ತನುಜಾ ಮಾಬೆನ್, ಪಿಯು ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು. ತುಳು ಸಂಘ ಸಂಚಾಲಕ ಡಾ.ಪುತ್ತಿ ವಸಂತಕುಮಾರ್ ಸ್ವಾಗತಿಸಿ, ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
ವಿಶ್ವ ತುಳು ಸಮ್ಮೇಳನ: 2020ಕ್ಕೆ ತುಳು ಸಾಹಿತ್ಯ ಅಕಾಡೆಮಿ ಬೆಳ್ಳಿಹಬ್ಬದ ಸಂಭ್ರಮ. ಆದ್ದರಿಂದ ಏಪ್ರಿಲ್‌ನಿಂದ 1 ವರ್ಷ ಅವಧಿಯಲ್ಲಿ ವಿಶ್ವ ತುಳು ಸಮ್ಮೇಳನ ಸಹಿತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ತುಳು ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು 3.6 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ದಯಾನಂದ ಕತ್ತಲ್‌ಸಾರ್ ತಿಳಿಸಿದರು.