

ಮಂಗಳೂರು: ತುಳು ಭಾಷಿಗರು ಕನ್ನಡ ಕೃತಿಗಳನ್ನು ಬರೆದಾಗ ಕೃತಿಯಂತೂ ಕನ್ನಡದ್ದು ಆಗಿದ್ದರೂ ಕೃತಿಯೊಳಗಡೆ ತುಳುವಿನ ಸತ್ವಗಳೇ ತುಂಬಿರುತ್ತದೆ. ಲಲಿತಾ ರೈ ಅವರ ಎಲ್ಲಾ ಕೃತಿಗಳಲ್ಲಿ ತುಳುವಿನ ನೈಜ ಸತ್ವ ಹಾಗೂ ವೈಚಾರಿಕ ನಿಲುವು ಇತ್ತು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅವರು ಹೇಳಿದರು.
ಅವರು ಶನಿವಾರ ತುಳು ಅಕಾಡೆಮಿ ವತಿಯಿಂದ ಹಿರಿಯ ಲೇಖಕಿ ಲಲಿತಾ ರೈ ಮತ್ತು ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ಶ್ರದ್ದಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಲಿತಾ ರೈ ಅವರ ಕಾದಂಬರಿ, ಸಣ್ಣ ಕತೆಯಲ್ಲಿ ವೈಚಾರಿಕತೆಯ ಅಂಶಗಳು ಅಡಗಿತ್ತು. ತುಳುವಿನಲ್ಲಿ ವೈಚಾರಿಕತೆಯನ್ನು ಇಟ್ಟುಕೊಂಡು ಕಾದಂಬರಿ, ಸಣ್ಣಕತೆಗಳನ್ನು ಬರೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಲಲಿತಾ ರೈ ಅವರು ಈ ವಿಚಾರದಲ್ಲಿ ಸಮರ್ಥರಾಗಿದ್ದರು ಎಂದರು.
ತುಳು ಭಾಷೆಯ ಅಭಿವೃದ್ಧಿಯಲ್ಲಿ ಯಕ್ಷಗಾನದ ಮೂಲಕ ದಿನೇಶ್ ಅಮ್ಮಣ್ಣಾಯರ ಕೊಡುಗೆ ಅಪಾರವಿದ್ದು, ಅವರ ತುಳು ಹಾಡುಗಳ ವೈಶಿಷ್ಟೃಗಳು ಕೃತಿಯ ರೂಪದಲ್ಲಿ ಹೊರತರುವ ಕೆಲಸವಾಗಬೇಕು ಎಂದು ಬಿ. ಎ ವಿವೇಕ ರೈ ಅವರು ಹೇಳಿದರು.
ಯಕ್ಷಗಾನ ವಿದ್ವಾಂಸ ಪ್ರೊ.ಪ್ರಭಾಕರ ಜೋಶಿ ಮಾತನಾಡಿ, ಲಲಿತಾ ರೈ ತಮ್ಮ ಕಾದಂಬರಿ, ಸಣ್ಣಕತೆಗಳಲ್ಲಿ ತನ್ನನ್ನು ಪ್ರಭಾವಿಸಿದ ಅಲೋಚನೆಗಳನ್ನು ಬರಹ ರೂಪಕ್ಕೆ ಇಳಿಸಿದ್ದು ಮಾತ್ರವಲ್ಲದೆ ಅದರಂತೆ ನಡೆದುಕೊಂಡವರು, ಇದೇ ರೀತಿಯಲ್ಲಿ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ರಾಗಭಾವವನ್ನು ಸಾಹಿತ್ಯಭಾವದೊಂದಿಗೆ ಸಮನ್ವಯಗೊಳಿಸುವ ಪ್ರಧಾನ ಗುಣವನ್ನು ಬೆಳೆಸಿಕೊಂಡು ಯಕ್ಷಗಾನ ಲೋಕದಲ್ಲಿ ತನ್ನದೇ ಸ್ಥಾನವನ್ನು ಉಳಿಸಿಕೊಂಡು ಹೋದರು ಎಂದರು.
ಹಿರಿಯ ಲೇಖಕಿ ಬಿ.ಎಂ.ರೋಹಿಣಿ ಮಾತನಾಡಿ, ಲೇಖಕಿ ಡಾ.ಜ್ಯೋತಿ ಚೇಳ್ಯಾರು, ಲಲಿತಾ ರೈ ಅವರ ಪುತ್ರ ಡಾ.ಜಿತೇಂದ್ರ ರೈ , ಭಾಸ್ಕರ ರೈ ಕುಕ್ಕುವಳ್ಳಿ , ಸುಬ್ರಹ್ಮಣ್ಯ ಬೈಪಾಡಿತ್ತಾಯ ಮಾತನಾಡಿದರು.
ಲಲಿತಾ ರೈ ಅವರ ಪುತ್ರಿ ಕೃಪಾ ರೈ, ಅಳಿಯ ಆನಂದ ಶೆಟ್ಟಿ, ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘದ ಅಧ್ಯಕ್ಷರಾದ ಶಕುಂತಲಾ ಶೆಟ್ಟಿ , ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಡಾ.ಮೀನಾಕ್ಷಿ ರಾಮಚಂದ್ರ ಸೇರಿದಂತೆ ಲೇಖಕರು, ಕಲಾವಿದರು ಉಪಸ್ಥಿತರಿದ್ದು, ನುಡಿನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನಡೆಸಿಕೊಟ್ಟರು.