ಮನೆ-ಮನಗಳಲ್ಲಿ ಪಸರಿಸಲಿ ತುಳು ಅಭಿಯಾನ

TuluAaisiri
ಉಡುಪಿಯಲ್ಲಿ ಆಯೋಜಿಸಿದ್ದ ತುಳು ಐಸಿರಿ ಕಾರ್ಯಕ್ರಮವನ್ನು ಕಾಸರಗೋಡು ಚಿನ್ನ ಉದ್ಘಾಟಿಸಿದರು. ಜಯಕರ್​ ಶೆಟ್ಟಿ ಇಂದ್ರಾಳಿ, ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಡಾ. ಪುತ್ತಿ ವಸಂತಕುಮಾರ್​, ಮಾಲತಿದೇವಿ ಎ., ರಂಗ ಪೈ, ಸಾಕ್ಷಿ ಇದ್ದರು
Published on

ನಟ ಕಾಸರಗೋಡು ಚಿನ್ನ ಆಶಯ | ತುಳು ಐಸಿರಿ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಅಕಾಡೆಮಿ ಶಿಕ್ಷಣಕ್ಕೆ ಮಾತ್ರ ತುಳು ಭಾಷೆ ಮತ್ತು ಲಿಪಿ ಸೀಮಿತವಾಗಬಾರದು. ಪಠ್ಯಕ್ರಮಕ್ಕಿಂತ ಹೆಚ್ಚಾಗಿ ಇಂತಹ ಸಾಂಪ್ರದಾಯಿಕ ಆಚರಣೆ, ಕಾರ್ಯಕ್ರಮದಿಂದ ತುಳುನಾಡ ಸಂಸ್ಕೃತಿ, ಸಂಸ್ಕಾರಕ್ಕೆ ಇನ್ನಷ್ಟು ಹೊಳಪು ಬರುತ್ತದೆ. ಮನೆಮನೆಯಲ್ಲಿ ತುಳು ಮಾತನಾಡುವಂತೆ ಅಭಿಯಾನದ ಕಿಡಿ ಪಸರಿಸಿದಾಗ ಈ ಭಾಷೆ ಉಳಿಯುತ್ತದೆ ಎಂದು ಚಲನಚಿತ್ರ ನಿರ್ದೇಶಕ, ನಟ ಕಾಸರಗೋಡು ಚಿನ್ನ ಹೇಳಿದರು.

ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ತುಳು ಸಂಘ ಮತ್ತು ತುಳುಕೂಟ (ರಿ.) ಉಡುಪಿ ಸಹಭಾಗಿತ್ವದಲ್ಲಿ ಮಂಗಳವಾರ ಆಯೋಜಿಸಿದ್ದ 10ನೇ ವರ್ಷದ ತುಳು ಐಸಿರಿ--2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಲಿಖಿತ ಸಾಹಿತ್ಯ ರಚನೆಯಾಗಲಿ

ಕೇರಳದಲ್ಲಿ ಸರ್ಕಾರ ತುಳು ಅಕಾಡೆಮಿ ಆರಂಭಿಸಿದ್ದರೂ ಸಹ ಅನುದಾನವನ್ನೇ ನೀಡಿಲ್ಲ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತುಳು ಭಾಷೆಯ ಲಿಖಿತ ಸಾಹಿತ್ಯ ರಚನೆಯಾಗಿ ಮುಂದಿನ ಜನಾಂಗಕ್ಕೆ ಲಭಿಸಿದಾಗ ಈ ಭಾಷೆ ಉಳಿಯಲು ಸಾಧ್ಯ. ತುಳುಕೂಟ, ತುಳು ಸಂಘಗಳ ಮೂಲಕ ಇನ್ನಿತರ ಭಾಷೆಗಳ ಸಂಸ್ಕೃತಿಯನ್ನೂ ಪರಿಚಯಿಸುವ ಕಾರ್ಯ ಕೈಗೊಂಡಾಗ ಭಾಷಾ ಬಾಂಧವ್ಯ ಉಂಟಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪಪೂ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಎ., ಮೋಹನದಾಸ್​ ಪೈ ಕೌಶಲ ಕೇಂದ್ರದ ನಿರ್ದೇಶಕ ರಂಗ ಪೈ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನನ್ಯಾ ಶಿವತ್ತಾಯ ತುಳು ಗೀತೆ ಹಾಡಿದರು. ತುಳು ಸಂಘದ ಸಂಚಾಲಕ ಡಾ. ಪುತ್ತಿ ವಸಂತಕುಮಾರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತುಳು ಸಂಘದ ಕಾರ್ಯದರ್ಶಿ ಸಾಕ್ಷಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಮೊದಲು ತುಳು ಸಂಪ್ರದಾಯದಂತೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಭೆಯ ಬಳಿಕ ಕಾಲೇಜಿನ ವಿದ್ಯಾರ್ಥಿಗಳು ತುಳು ಸಂಸ್ಕೃತಿ ಹಾಗೂ ಸಂಪ್ರದಾಯ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯಾರ್ಥಿಗಳಿಗೆ ಲಭಿಸುತ್ತಿಲ್ಲ ತುಳು ಕೋಟಾ

ತುಳುಕೂಟ ಉಡುಪಿಯ ಅಧ್ಯಕ್ಷ ಲಯನ್​ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಮಾರುಕಟ್ಟೆಯಲ್ಲಿ ಲಭಿಸುವುದಿಲ್ಲ. ನಮ್ಮ ನೆಲ ಹಾಗೂ ಭಾಷೆಯ ಋಣ ತೀರಿಸಲು ಮೂಲ ಜನರೆಲ್ಲರೂ ಮನೆಯಲ್ಲಿ ತುಳು ಭಾಷೆಯಲ್ಲೇ ಮಾತನಾಡಬೇಕು. ಆಗಲೇ ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಯಲು ಸಾಧ್ಯ. ಅನ್ಯ ಭಾಷೆ ಕಲಿಯೋಣ. ಆದರೆ, ತುಳು ಭಾಷೆ ಮರೆಯಬಾರದು. ಕರಾವಳಿ ಜಿಲ್ಲೆಯ 4 ಕಾಲೇಜುಗಳಲ್ಲಿ ತುಳು ಕೋಟಾ ಮೀಸಲಿತ್ತು. ಆದರೆ, 3 ಕಾಲೇಜುಗಳು ಡೀಮ್ಡ್​ (ಸ್ವಾಯತ್ತ) ಯುನಿವರ್ಸಿಟಿ ಆಗಿದ್ದರಿಂದ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ತುಳು ಕೋಟಾ ಸಿಗದಾಗಿದೆ. ಹೀಗಾಗಿ ಬಡ ಕುಟುಂಬದ ತುಳು ವಿದ್ಯಾರ್ಥಿಗಳಿಗೆ ಮತ್ತೆ ಕೋಟಾ ಸಿಗುವಂತಾಗಲು ಈ ಭಾಗದ ಶಾಸಕರು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net