

ಕಲಾದಗಿ: ಗ್ರಾಮ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಸಂಜೆಯಿಂದ ರಾತ್ರಿಯಿಡೀ ಸುರಿದ ಮಳೆಗೆ ತುಳಸಿಗೇರಿ ಕೆರೆ ತುಂಬಿ ಕೋಡಿ ಹರಿದಿದ್ದು, ಸಮೀಪದ ಪ್ರಸಿದ್ಧ ಹನುಮಂತದೇವರ ದೇವಸ್ಥಾನ ಜಲದಿಗ್ಬಂದನಕ್ಕೆ ಒಳಗಾಗಿದೆ.
ನೀರಬೂದಿಹಾಳ, ಶೆಲ್ಲಿಕೇರಿ, ಕೆರಕಲಮಟ್ಟಿ ಪ್ರದೇಶಗಳಲ್ಲಿ ಹಾಗೂ ತುಳಸಿಗೇರಿಯಲ್ಲಿ ಅಬ್ಬರಿಸಿದ ಮಳೆಯಿಂದ ಹರಿದು ಬಂದ ನೀರು ಕೆರೆಗೆ ಸೇರಿಕೊಂಡಿದೆ. ಮಂಗಳವಾರ ಬೆಳಗ್ಗೆ ಹೊತ್ತಿಗೆ ಕೆರೆ ಪೂರ್ಣ ತುಂಬಿ ಕೋಡಿ ಬಿದ್ದಿದ್ದಕ್ಕೆ ಜನರಲ್ಲಿ ಸಂತಸ ಮೂಡಿದೆ. ಕೋಡಿ ಹರಿದು ನೀರು ಹೋಗುವ ದಾರಿಯಲ್ಲಿರುವ ಹನುಮಂತ ದೇವರ ದೇವಸ್ಥಾನ ಜಲಾವೃತವಾಗಿದೆ.
ಹರಿಯುತ್ತಿರುವ ನೀರಿನಲ್ಲಿಯೇ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡುತ್ತ ಸಾಗುವ ಭಕ್ತರು, ಹೊಸ ಅನುಭವದೊಂದಿಗೆ ದೇವರ ದರ್ಶನ ಪಡೆಯುತ್ತಿದ್ದಾರೆ. 2019 ರ ಜೂನ್‌ನಲ್ಲಿ ಭಾರಿ ಮಳೆಗೆ ತುಳಸಿಗೇರಿ ಕೆರೆ ಕೋಡಿ ಬಿದ್ದು ಹನುಮಂತ ದೇವರ ದೇವಸ್ಥಾನ ಜಲಾವೃತವಾಗಿತ್ತು.
ದರ್ಶನ ಅಬಾಧಿತ: ಹನುಮಂತದೇವರ ದೇವಸ್ಥಾನ ಆಸುಪಾಸಿನ ಪ್ರದೇಶ, ಮುಂಭಾಗದ ಮುಖ್ಯ ರಸ್ತೆ, ಪಕ್ಕದ ಸ್ಥಳ,ಮುಂಭಾಗದ ಪ್ರದೇಶದಲ್ಲಿಯ ಅಂಗಡಿಗಳು ಜಲಾವೃಗೊಂಡಿವೆ. ಯಾತ್ರಿನಿವಾಸ, ಶೌಚಗೃಹಗಳು ಹೆಚ್ಚಿನ ಪ್ರಮಾಣದ ನೀರಿನಿಂದ ಆವೃತಗೊಂಡಿವೆಯಾದರೂ ದೇವರ ದರ್ಶನಕ್ಕೆ ಯಾವುದೇ ತೊಂದರೆ ಆಗಿಲ್ಲ.