

ಮೈಸೂರು: ನಗರದ ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯ ದೇವಸ್ಥಾನ ಆವರಣದಲ್ಲಿ ತುಳಸಿ ಪೂಜೆ ಶನಿವಾರ ನಡೆಯಿತು. ತುಳಸಿ ಕಟ್ಟೆ ಶುಚಿಗೊಳಿಸಿ ಬಣ್ಣ ಹಚ್ಚಿ ನಂತರ ಕಬ್ಬು, ತಳಿರು ತೋರಣ ಹಾಗೂ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ ಮಾತನಾಡಿ, ಹಿಂದುಗಳಿಗೆ ತುಳಸಿ ಗಿಡ ಅತ್ಯಂತ ಪವಿತ್ರವಾದದ್ದು. ತುಳಸಿ ಗಿಡ ತನ್ನದೇ ಆದ ವೈಶಿಷ್ಟೃ ಹೊಂದಿದೆ. ಶ್ರೀಕೃಷ್ಣನ ಕಾಲದಿಂದಲೂ ತುಳಸಿಗೆ ಎಲ್ಲ ಗಿಡಕ್ಕಿಂತ ಶ್ರೇಷ್ಠವಾದ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶ ಪ್ರತಿಯೊಂದರಲ್ಲೂ ವಿಭಿನ್ನತೆಯನ್ನು ಹೊಂದಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯವು ಶ್ರೀಮಂತಿಕೆಯಿಂದ ಕೂಡಿದೆ. ನಾವು ಆಚರಣೆ ಮಾಡುವ ಪ್ರತಿಯೊಂದು ಹಬ್ಬ, ಹರಿದಿನಗಳು ವಿಶಿಷ್ಟವಾಗಿದೆ. ತುಳಸಿ ಪೂಜೆಯನ್ನು ಪ್ರತಿ ವರ್ಷ ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಏಕಾದಶಿ ದಿನದಂದು ನೆರವೇರಿಸಲಾಗುತ್ತದೆ ಎಂದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಕಾಯಿಲೆಗಳಿಂದ ದೂರ ಇರಬಹುದು. ತುಳಸಿ ಗಿಡವು ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ. ಹಾಗಾಗಿ ತುಳಸಿ ಗಿಡಕ್ಕೆ ನಿತ್ಯ ಪೂಜೆ ಸಲ್ಲಿಸಿದರೆ ಉತ್ತಮ ಗಾಳಿಯನ್ನು ಸೇವಿಸಬಹುದು ಎದು ಹೇಳಿದರು. ಈ ಸಂದರ್ಭ ಭಕ್ತಾದಿಗಳಿಗೆ ಉಚಿತ ತುಳಸಿ ಗಿಡಗಳನ್ನು ವಿತರಿಸಲಾಯಿತು.