ಕೊರಟಗೆರೆ ಆಸ್ಪತ್ರೆಗೆ ತುಳಸಿ ಮದ್ದಿನೇನಿ ಭೇಟಿ

1
Published on

ರೋಗಿಗಳಿಗಿರುವ ಸೌಕರ್ಯ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ | ಪ್ರತಿ ತಾಲೂಕಿನಲ್ಲೂ 2,000 ನಿವೇಶನ ಗುರುತಿಸಿ ಹಂಚುವ ಗುರಿ

ವಿಜಯವಾಣಿ ಸುದ್ದಿಜಾಲ ಕೊರಟಗೆರೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿಮದ್ದಿನೇನಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿಗಾಗಿ ಹೆಚ್ಚು ಮಹಿಳೆಯರು ಬರುತ್ತಿದ್ದು, ಗ್ರಾಮೀಣ ಮಹಿಳೆಯರಿಗೆ ಅನುಕೂಲ ವಾಗುವ ದೃಷ್ಟಿಯಿಂದ ಅಗತ್ಯತೆ ತಿಳಿದು ಸ್ಕ್ಯಾನಿಂಗ್​ ಮಿಷನ್​ ಒದಗಿಸುವ ಮತ್ತು ಅದನ್ನು ನಿರ್ವಹಿಸುವ ರೇಡಿಯೋಲಜಿ ತರನ್ನು ನೇಮಿಸುವ ವ್ಯವಸ್ಥೆ ಮಾಡಲಾಗುವುದು. ತಾಲೂಕಿನಲ್ಲಿ 6 ಡೆಂ ಪ್ರಕರಣಗಳು ಪತ್ತೆಯಾಗಿದ್ದು, ರೋಗ ತಡೆಗೆ ಕ್ರಮವಹಿಸಲಾಗುತ್ತಿದೆ. ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಿನಕ್ಕೆ ಸರಾಸರಿ 500 ಒಪಿಡಿ ರೋಗಿಗಳು ಬರುತ್ತಿದ್ದು, ನೂತನ ಆಸ್ಪತ್ರೆಗೆ ಜಾಗ ಮಂಜೂರು ಆಗಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಶ್ರೀದಲ್ಲಿ ಸ್ಥಳ ಪರಿಶೀಲಿಸಲಾಗುವುದು ಎಂದರು.


ಪ್ರತಿ ತಾಲೂಕಿಗೂ 2000 ನಿವೇಶನ ಗುರುತು: ತಾಲೂಕಿನಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಫಲಾನುಭವಿಗಳ ಅಯ್ಕೆ ಮಾಡಲಾಗುತ್ತಿದೆ. ಆಯ್ಕೆ ಪ್ರಕ್ರಿಯೆಗೆ ಚುರುಕು ನೀಡಿ ಅಕ್ಟೋಬರ್​ ಒಳಗೆ ಮುಗಿಸಿ ಡಿಸೆಂಬರ್​ ಒಳಗಾಗಿ ಸವಲತ್ತುಗಳನ್ನು ಸಂಪೂರ್ಣವಾಗಿ ವಿತರಿಸುವಂತೆ ಸೂಚಿಸಲಾಗಿದೆ. ಅಂಗವಾಡಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಅರ್ಜಿ ಪಡೆದ್ದಿದ್ದು, ತಿಂಗಳಾಂತ್ಯಕ್ಕೆ ಹುದ್ದೆಗಳನ್ನು ತುಂಬಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದರು. ತುಮಕೂರು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ 2,000 ನಿವೇಶಗಳನ್ನು ಗುರುತಿಸಿ ಹಂಚುವ ಗುರಿ ಹೊಂದಿದ್ದು, ಕೆಲ ಕಡೆ ಕಲ್ಲು ಬಂಡೆಗಳಿದ್ದು, ನಿವೇಶನ ಗುರುತಿಸಲು ವಿಳಂಬವಾಗುತ್ತಿದೆ. ಸೂಕ್ತ ಜಾಗ ಗುರುತಿಸಿ, ಪಹಣಿದಾರರ ಹೆಸರನ್ನು ಆಧಾರ್​ ಜೋಡನೆ ಮಾಡುವುದನ್ನು ಮತಷ್ಟು ಚುರುಕು ಗೊಳಿಸುವಂತೆ ಸೂಚಿಸಲಾಗಿದೆ ಎಂದರು.

ಔಷಧ ದಾಸ್ತಾನು ಸಿಬ್ಬಂದಿಗೆ ನೋಟಿಸ್​: ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಭೇಟಿ ಪರಿಶೀಲಿಸುವಾಗ ಔಷಧ ಕೇಂದ್ರದಲ್ಲಿ ಸಿಬ್ಬಂದಿ ಆಸ್ಪತ್ರೆಯ ಒಳರೋಗಿಗಳ ವಿವರವನ್ನು ರಿಜಿಸ್ಟಾರ್​ನಲ್ಲಿ 14 ಎಂದು ನಮೂದಿಸಿದ್ದು, ನಂತರ ಆ ವಿವರವನ್ನು ಇಲಾಖೆಗೆ ಕಂಪ್ಯೂಟರ್​ನಲ್ಲಿ ವರದಿ ಸಲ್ಲಿಸುವಾಗ 114 ಎಂದು ವರದಿ ನೀಡಲಾಗಿತ್ತು, ಈ ಬಗ್ಗೆ ಕಾರ್ಯದರ್ಶಿಗಳು ವಿಚಾರಿಸಿದಾಗ ಎಂಟ್ರಿಯಲ್ಲಿ ಮಿಸ್ಟೇಕ್​ ಆಗಿದೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಸಿಬ್ಬಂದಿಗೆ ನೋಟಿಸ್​ ನೀಡಲು ಸೂಚಿಸುವುದಾಗಿ ಜಿಲ್ಲಾ ಕಾರ್ಯದರ್ಶಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net