

ಶಿರಸಿ: ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಅತ್ಯಂತ ಕಿರಿಯ ವಯಸ್ಸಿನ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ.
ಲಂಡನ್ ಮೂಲದ ಪ್ರತಿಷ್ಠಿತ ವರ್ಡ್ 9 ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರಿಸಿದೆ.
ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತುಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ ಪಟ್ಟಿಗೆ ಸೇರಿರಲಿಲ್ಲ ಎಂದು ಸಂಸ್ಥೆ ತಿಳಿಸಿದೆ. ಈ ದಾಖಲೆಗೆ ತುಳಸಿ ಹೆಗಡೆ ಹೆಸರು ಸೇರ್ಪಡೆಯಿಂದ ಯಕ್ಷಗಾನದ ಹೆಸರೂ ಸೇರಿದಂತಾಗಿದೆ.
ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ತುಳಸಿ ಹೆಗಡೆ, ಮೂರನೇ ವಯಸ್ಸಿಗೆ ಯಕ್ಷಗಾನ ಕ್ಷೇತ್ರಕ್ಕೆ ಹೆಜ್ಜೆ ಇಟ್ಟವಳು. ಐದೂವರೆ ವರ್ಷದವಳಿದ್ದಾಗ ವಿಶ್ವ ಶಾಂತಿ ರೂಪಕಗಳನ್ನು ಪ್ರಸ್ತುತಪಡಿಸಿದ್ದಳು. ಪೌರಾಣಿಕ ಆಖ್ಯಾನಗಳ 9 ರೂಪಕಗಳನ್ನು ಪ್ರಸ್ತುತಗೊಳಿಸುವ ಈಕೆ, ರಾಜ್ಯ, ಹೊರ ರಾಜ್ಯಗಳಲ್ಲಿ 850ಕ್ಕೂ ಅಧಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಹಿರಿಯ ಕಲಾವಿದರೊಂದಿಗೆ ಬೇರೆ ಬೇರೆ ಯಕ್ಷಗಾನ ಆಖ್ಯಾನಗಳಲ್ಲೂ ಪಾತ್ರ ಮಾಡುತ್ತಿದ್ದಾಳೆ.
ಈಗಾಗಲೇ ಇಂಡಿಯಾ ಬುಕ್ ಆಪ್ ರೆಕಾರ್ಡ್‌ನಲ್ಲಿಯೂ ದಾಖಲಾಗಿದ್ದು, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ, ಟೈಮ್ಸ್ ಆಫ್ ಇಂಡಿಯಾದ ದೇಶ ಮಟ್ಟದ 21 ವರ್ಷದೊಳಗಿನ ಅನ್ ಸ್ಟಾಪೇಬಲ್ 21 ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಅವಕಾಶ ಸಿಕ್ಕಿತ್ತು.